ಯಾದಗಿರಿ: ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಅವೈಜ್ಞಾನಿಕ ನಿರ್ಧಾರಗಳನ್ನು ಕೈ ಬಿಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಡಾ. ಚಂದ್ರಕಾಂತ ನರಿಬೋಳ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 41 ಆರೋಗ್ಯ ಕೇಂದ್ರಗಳು, 6 ಸಮುದಾಯ ಆರೋಗ್ಯ ಕೇಂದ್ರಗಳು. 2 ತಾಲೂಕು ಆಸ್ಪತ್ರೆಗಳಿವೆ. ಇವುಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 29, ಸಿಎಚ್ಸಿನಲ್ಲಿ 5 ಹಾಗೂ ತಾಲೂಕು ಆಸ್ಪತೆಗಳಲ್ಲಿ 10 ವೈದ್ಯರು ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಕೇವಲ 4 ವೈದ್ಯರು ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ಬಹಳಷ್ಟು ವೈದ್ಯ ಹುದ್ದೆಗಳು ಖಾಲಿ ಉಳಿದಿವೆ.
ವಾಸ್ತವ ಹೀಗಿದ್ದರೂ ಪ್ರಧಾನ ಕಾರ್ಯದರ್ಶಿಗಳು ಕಳೆದ ಫೆಬ್ರವರಿಯಲ್ಲಿ ಆದೇಶ ಹೊರಡಿಸಿ, ಮಂಜೂರಾದ ಹುದ್ದೆಗಳನ್ನು ರದ್ದು ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ಐಎಎಸ್ ಅಧಿಕಾರಿಗಳನ್ನು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿಕೊಳ್ಳಬೇಕು. ಆಹಾರ ಸುರಕ್ಷತೆ ಕಾಯಿದೆ ಅಡಿಯಲ್ಲಿ ಬರುವ ಅಧಿಕಾರಿಗಳ ಹುದ್ದೆಗೆ ವೈದ್ಯಾಧಿಕಾರಿಗಳನ್ನೇ ನೇಮಕ ಮಾಡಿಕೊಳ್ಳಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಡಾ. ಅಯ್ಯಣಗೌಡ, ಡಾ. ರಮೇಶ, ಡಾ. ಆರ್.ವಿ. ನಾಯಕ್, ಡಾ. ಹನುಮಂತರೆಡ್ಡಿ, ಡಾ. ಮುಜಾಬ್ಬರ್ ಅಬ್ಬಾಸ್ ಸಾಜಿದ್, ಡಾ. ಜಿ. ಅಭಯಕುಮಾರ್, ಡಾ. ಓಂಪ್ರಕಾಶ ಕಟ್ಟಿಮನಿ, ಡಾ. ದಿವಾಕರ್ ಮಾಳಗೆ, ಡಾ. ವಿಜಯಕುಮಾರ್, ಡಾ. ವಿವೇಕಾನಂದ ರೆಡ್ಡಿ, ಡಾ. ಅನಿಲ್ಕುಮಾರ್ ಬಣಕಾರ್, ಡಾ. ಅಶೋಕ ರೆಡ್ಡಿ, ಡಾ. ಮಲ್ಲಪ್ಪ, ಡಾ. ಜ್ಯೋತಿ ಕಟ್ಟಿಮನಿ, ಡಾ. ಶಶಿಕಲಾ, ಸಹಾಯ ಲೆಕ್ಕಿಗ ಕಂಟೆಪ್ಪ ಕ್ಯಾದೆ, ಯಾದವ ಕುಲಕರ್ಣಿ ಸೇರಿದಂತೆ ಮತ್ತಿತರರು ಇದ್ದರು.