ಯಾದಗಿರಿ: ತಾಲೂಕಿನ ಅರಿಕೇರಾ(ಬಿ) ಗ್ರಾಮ ಪಂಚಾಯಿತಿ ಪಿಡಿಒ ಅವರನ್ನು ವರ್ಗಾವಣೆ ಮಾಡದೆ ಸೇವೆಯಲ್ಲಿ ಮುಂದುವರಿಸಬೇಕೆಂದು ಪಂಚಾಯಿತಿ ಉಪಾಧ್ಯಕ್ಷ ಬಸವರಾಜ ಮತ್ತು ಸದಸ್ಯ ಹಣಮಂತ ಅಚ್ಚೋಲಾ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಮನವಿ ಸಲ್ಲಿಸಿದ್ದಾರೆ. ಅರಿಕೇರಾ(ಬಿ) ಪಂಚಾಯಿತಿ ಪಿಡಿಒ ದಕ್ಷ ಅಧಿಕಾರಿಯಾಗಿದ್ದು, ಸರ್ಕಾರದ ಯೋಜನೆಗಳನ್ನು ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಈ ಅಧಿಕಾರಿಯನ್ನು ವರ್ಗಾವಣೆಗೊಳಿಸಲು ಪ್ರಯತ್ನಿಸುತ್ತಿದ್ದಾರೆಂದು ತಿಳಿಸಿದ್ದಾರೆ. ಗ್ರಾಮದ ಜನರ ಹಿತಾಸಕ್ತಿಯಿಂದ ಪಿಡಿಒ ಅವರನ್ನು ಅರಿಕೇರಾ(ಬಿ) ಪಂಚಾಯಿತಿಯಲ್ಲೇ ಮುಂದುವರಿಸಬೇಕು. ಇಲ್ಲದಿದ್ದಲ್ಲಿ ಗ್ರಾಮಸ್ಥರಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಪಂಪನಗೌಡ, ಸುರೇಶ ಬಸವಂತಪುರ, ಪ್ರೇಮಕುಮಾರ, ಸಾಹೇಬಗೌಡ ಅರಿಕೇರಾ, ಮಲ್ಲಪ್ಪ ಬಡಿಗೇರಾ, ಶಿವರುದ್ರ, ಹಣಮಂತ ಶಾಸೀ, ಭೀಮರಡ್ಡಿ ಇನ್ನಿತರರು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಪ್ರಾಣಿ ಬಲಿ ನಿಷೇಧ
ಯಾದಗಿರಿ: ತಾಲೂಕಿನ ಹೈಯ್ಯಾಳ(ಬಿ) ಗ್ರಾಮದಲ್ಲಿ ಹೈಯ್ಯಾಳ ಲಿಂಗೇಶ್ವರ ದೇವರ ಜಾತ್ರೆ ನಿಮಿತ್ತ ಆ.8ರಿಂದ 11ರವರೆಗೆ ಜಾತ್ರಾ ಸ್ಥಳದ 200 ಮೀಟರ್ ವ್ಯಾಪ್ತಿಯಲ್ಲಿ ಪ್ರಾಣಿ ಬಲಿ ನೀಡುವುದನ್ನು ನಿಷೇಧಿಸಿ ಜಿಲ್ಲಾದಂಡಾಧಿಕಾರಿ ಮನೋಜ್ ಜೈನ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ 1959 ಮತ್ತು ಕರ್ನಾಟಕ ಪ್ರಾಣಿ ಬಲಿ ನಿಷೇಧ ನಿಯಮಗಳು 1963ರ ಕಾಯ್ದೆ ಮತ್ತು ಯಾವುದೇ ಕಾರಣಕ್ಕೂ ಪ್ರಾಣಿಹಿಂಸೆ ಪ್ರತಿಭಂದಕ ಕಾಯ್ದೆ 1960ನ್ನು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಜಾತ್ರಾ ಸಂದರ್ಭದಲ್ಲಿ ಈ ಗ್ರಾಮದಲ್ಲಿ ಸೂಕ್ತ ಬಂದೋಬಸ್ತ್ ಒದಗಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು, ಸಹಾಯಕ ಆಯುಕ್ತರು, ಉಪನಿರ್ದೇಶಕರು ಪಶುಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆ ಹಾಗೂ ತಹಸೀಲ್ದಾರರು ಯಾದಗಿರಿ ಇವರಿಗೆ ನಿರ್ದೇಶಿಸಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.
ವಕೀಲ ತರಬೇತಿಗೆ ಅರ್ಜಿ
ಯಾದಗಿರಿ: 2014-15ನೇ ಸಾಲಿಗೆ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ವಕೀಲರ ಅಥವಾ 20 ವರ್ಷಗಳಿಗಿಂತ ಹೆಚ್ಚು ವಕೀಲ ವೃತ್ತಿ ಅನುಭವವಿರುವ ವಕೀಲರಿಂದ ತರಬೇತಿ ಕೊಡಿಸುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತರಬೇತಿ ಅವಧಿ 4 ವರ್ಷವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 1000 ತರಬೇತಿ ಭತ್ಯೆ ನೀಡಲಾಗುವುದು. ಅರ್ಜಿಗಳನ್ನು ಆ.20ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯಕ್ಕೆ ಸಂಪರ್ಕಿಸಲು ಕೋರಿದೆ.
ಹೆಂಡ ಜಪ್ತಿ
ಯಾದಗಿರಿ: ಜಿಲ್ಲಾ ಅಬಕಾರಿ ಉಪ ಆಯುಕ್ತರ ನಿರ್ದೇಶನದಲ್ಲಿ ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ನಡೆಸಿ 50 ಲೀ ಕಲಬೆರಕೆ ಹೆಂಡವನ್ನು ಜಪ್ತಿ ಮಾಡಲಾಗಿದೆ. ಅಬಕಾರಿ ನಿರೀಕ್ಷಕ ಶಾಂತೇಶ ಕಮತರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಕಾಶಮ್ಮ ರಾಮಸಮುದ್ರ ಪರಾರಿಯಾಗಿದ್ದಾಳೆ. ದಾಳಿಯಲ್ಲಿ ಅಬಕಾರಿ ರಕ್ಷಕ ಬಸಲಿಂಗಯ್ಯ ರಾಮೇಶ್ವರ, ಮಹಿಬೂಬ್ ಅಲಿ, ಪ್ರವೀಣಕುಮಾರ ಮತ್ತು ಕೂಲಿ ಮಲ್ಲಪ್ಪ ನಿಡಗಿ ಪಾಲ್ಗೊಂಡಿದ್ದರು ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.
ಅಂಗವಿಕಲರಿಗೆ ಅವಕಾಶ ನೀಡಿ
ಯಾದಗಿರಿ: ಇಂದಿನ ಸಮಾಜದಲ್ಲಿ ಇತರರಂತೆ ಬಾಳಲು ವಿಕಲಚೇತನರಿಗೆ ಅನುಕಂಪ ಬೇಡ, ಅವರಿಗೆ ಅವಕಾಶ ನೀಡಿ ಪ್ರೋತ್ಸಾಹಿಸಿದಲ್ಲಿ ಮಾನಸಿಕವಾಗಿ ಸಿದ್ಧರಾಗುತ್ತಾರೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪ್ರಭು ಮಾತನಾಡಿದರು. ಕ್ಷೇತ್ರ ಸಂಪನ್ಮೂಲ ಕೇಂದ್ರ ಯಾದಗಿರಿಯಲ್ಲಿ ಹಮ್ಮಿಕೊಂಡ ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು ಅದರ ಸದುಪಯೋಗವನ್ನು ಪಲಾನುಭವಿಗಳು ಪಡೆಯುವಂತೆ ಶಿಕ್ಷಕರು ಪಾಲಕರ ಮನವೊಲಿಸಬೇಕೆಂದರು. ಅತಿಥಿಯಾಗಿದ್ದ ಮಾರುತಿ ಹುಜರತಿ ಮಾತನಾಡಿ, ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಮಾನಸಿಕ ಸಿದ್ಧತೆ ಅತಿ ಮುಖ್ಯವಾಗಿದ್ದು ಪಾಲಕರು ಹಾಗೂ ಸಮಾಜ ಅವರನ್ನು ಪ್ರೀತಿ ಗೌರವದಿಂದ ಕಾಣಬೇಕು ಎಂದರು. ಶಿಬಿರದಲ್ಲಿ ಬೆಂಗಳೂರಿನ ವೈದ್ಯಾಧಿಕಾರಿ ತಂಡದ ಡಾ. ಸುದರ್ಶನ, ಡಾ. ನಾಗೇಶ, ಡಾ. ಮಹೇಶ, ಹಾಗೂ ರೇಣ್ಣಸಿದ್ದಲಿಂಗಪ್ಪ ತಪಾಸಣಾ ಕೈಗೊಂಡರು. ಎಪಿಸಿ ಬಸನಗೌಡ ಪಾಟೀಲ್, ಯಲ್ಲಪ್ಪ ಇದ್ದರು. ತಾಲೂಕಿನ ವಿಶೇಷ ಅಗತ್ಯತೆಯುಳ್ಳ ಮಕ್ಕಳು ಇದ್ದರು. ದೇವಿಂದ್ರಪ್ಪ, ಸ್ವಾಗತಿಸಿದರು. ನಾಗರೆಡ್ಡಿ ನಿರೂಪಿಸಿದರು.
ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ: ರಸ್ತೆ ತಡೆ
ಶಹಾಪುರ: ಡಾ. ಅಂಬೇಡ್ಕರರ ಭಾವಚಿತ್ರಕ್ಕೆ ಮಂಗಳವಾರ ತಡರಾತ್ರಿ ದುಷ್ಕರ್ಮಿಗಳು ಆಯಿಲ್ಪೇಂಟ್ನಿಂದ ಬಳೆದು ವಿಕಾರಗೊಳಸಿದ್ದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಘಟನೆ ತಾಲೂಕಿನ ಗುಂಡಳ್ಳಿ ಗ್ರಾಮದಲ್ಲಿ ನಡೆಯಿತು. ಭಾವಚಿತ್ರಕ್ಕೆ ಅವಮಾನ ಮಾಡಿದ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆಕಾರರು ಆಗ್ರಹಿಸಿದರು. ಈ ಸಂಧರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಶಿವಪುತ್ರ ಜವಳಿ ತಾಲುಕು ಸಂಚಾಲಕರಾದ ಶಿವುಕುಮಾರ ತಳವಾರ, ಮುಖಂಡರಾದ ಶರಣಪ್ಪ ಚಿಪ್ಪಾರ, ತಿಪ್ಪಣ್ಣ ಲಂಡನಕರ್ ಹೊಬಳ್ಳಿ, ಸಂಚಾಲಕ ಬಾಲರಾಜ ಖಾನಾಪುರ ಸಂತೋಷ ಗುಂಡಳ್ಳಿ ಸೇರಿದಂತೆ ನೂರಾರು ಜನ ಕಾರ್ಯಕರ್ತರು ಮಹಿಳೆಯರು ಭಾಗವಹಿಸಿದ್ದರು. ಘಟನಾ ಸ್ಥಳಕ್ಕೆ ಡಿಎಸ್ಪಿ ಬಿ.ಎಸ್. ಬಸರಗಿ, ಶಹಾಪುರ ಸಿಪಿಐ ಜೆ.ಎಸ್. ನ್ಯಾಮೇಗೌಡ, ವಡಗೇರಾ ಪಿಎಸ್ಐ ಹಾಗೂ ಪೊಲೀಸ್ ಸಿಬ್ಬಂದಿ ಆಗಮಿಸಿ ಸೂಕ್ತ ಬಂದೋಬಸ್ತ್ ವ್ಯವಸ್ಥೆಗೊಳಿಸಿ ವಾತಾವರಣ ತಿಳಿಗೊಳಿಸಿದರು. ಡಿಎಸ್ಪಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು ಕೆಲ ಕಾಲ ಪ್ರಯಾಣಿಕರು ಪರದಾಡುವಂತಾಗಿತ್ತು.