ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಡಾನೆ ಹಾವಳಿ: ಪರಿಹಾರಕ್ಕೆ ಒತ್ತಾಯ

Rashmi Kasaragodu
Updated On : 2 Apr 2013, 12:27 pm

ಕ.ಪ್ರ. ವಾರ್ತ್ಣೆ ಹಾಸನ   ಏ.1
ಕಾಡಾನೆ ಹಾವಳಿಯಿಂದ ಪ್ರಾಣಹಾನಿ, ಆಸ್ತಿಹಾನಿಯಂದ ಕಂಗೆಟ್ಟಿರುವ ಗ್ರಾಮಸ್ಥರಿಗೆ ಸೂಕ್ತ ರಕ್ಷಣೆ ಹಾಗೂ ಕಾಡಾನೆ ಹಾವಳಿಯಿಂದ ಶಾಶ್ವತ ಪರಿಹಾರ  ಒದಗಿಸುವಂತೆ ಆಗ್ರಹಿಸಿ ಸಕಲೇಶಪುರ ತಾಲೂಕಿನ ಕಾಡಾನೆ ಹಾವಳಿಯಿಂದ ತತ್ತರಿಸುವ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಾಡಾನೆಯಿಂದ ಮುರಿದು ಬಿದ್ದಿರುವ ಅಡಕೆ ಮರಗಳು, ಕಾಫಿ ಗಿಡಗಳನ್ನು ಸುರಿತು ಕೂಡಲೇ ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಸಕಲೇಶಪುರ ತಾಲೂಕು ಮಲೆನಾಡು ಪ್ರದೇಶವಾಗಿದ್ದು, ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದ ತಾಲೂಕಿನ ಚಿಕ್ಕಲ್ಲೂರು, ಕೊತ್ತನಹಳ್ಳಿ, ದೊಡ್ಡಕಲ್ಲೂರು, ಕೆರೋಡಿ, ಐಗೂರು, ಮಾಗಲು, ಸರಗಳ್ಳಿ, ಕುಂಬಾರಗೇರಿ, ಯಡಕೇರಿ, ಬಿಳ್ಳಳ್ಳಿ, ಕುಂಬ್ರಹಳ್ಳಿ, ಯಸಳೂರು ಹೋಬಳಿಯ ಗ್ರಾಮಗಳಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಕಾಡಾನೆಗಳ ಹಾವಳಿ ದಿನೇ ದಿನೇ ಈ ಭಾಗದಲ್ಲಿ ಹೆಚ್ಚಾಗುತ್ತಿರುವುದರಿಂದ ಗ್ರಾಮಸ್ಥರು ಮನೆಯಿಂದ ಹೊರಗೆ ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾತ್ರಿ ವೇಳೆಯಲ್ಲಿ ಗ್ರಾಮಗಳಿಗೆ ಆಗಮಿಸುತ್ತಿದ್ದ ಕಾಡಾನೆಗಳು ಬೆಳಗಿನ ಸಮಯದಲ್ಲಿಯೇ ರಸ್ತೆಗಳಲ್ಲಿ ರಾಜಾರೋಷವಾಗಿ ಓಡಾಡುತ್ತಿರುವುದರಿಂದ ಗ್ರಾಮಸ್ಥರು ಯಾವುದೇ ಕೆಲಸ ಕಾರ್ಯಗಳನ್ನು ಮಾಡದಂತಾಗಿದ್ದು, ಈಗಾಗಲೇ ಈ ಭಾಗದಲ್ಲಿ ಅಲವಾರು ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ರೈತರು ಬೆಳೆದಂತಹ ಬೆಳೆಗಳನ್ನು ನಾಶ ಮಾಡಿ ರೈತರನ್ನು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದ್ದು, ಜಮೀನು ಅಭಿವೃದ್ಧಿಗಾಗಿ ಪಡೆದ ಬ್ಯಾಂಕ್ ಸಾಲ ಮರು ಪಾವತಿಸಲು ಸಾಧ್ಯವಾಗದಂತಾಗಿದೆ ಎಂದು ಈ  ಸಂದರ್ಭದಲ್ಲಿ ಅಲವತ್ತುಕೊಂಡರು.
ಜಿಲ್ಲೆಯಲ್ಲಿ ಪುಂಡಾಟ ನಡೆಸುತ್ತಿರುವ ಎಲ್ಲಾ ಕಾಡಾನೆಗಳ ಸೆರೆ ಕಾರ್ಯಾಚರಣೆಗೆ ಡಿಸೆಂಬರ್ನಲ್ಲಿ ಚಾಲನೆ ನೀಡಲಾಗುವುದು ಎಂದಿದ್ದ ರಾಜ್ಯ ಸರ್ಕಾರ ಈ ವರೆಗೂ ಈ ನಿಟ್ಟಿನಲ್ಲಿ
ಕಾರ್ಯೋನ್ಮುಖವಾಗಿಲ್ಲ. ಇದು ಮಲೆನಾಡು ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಕೂಡಲೇ ಎಲಿಫೆಂಟ್ ಆಪರೇಷನ್ ಆರಂಭಿಸುವಂತೆ ಮಲೆನಾಡಿನ ರೈತರು, ಕಾಫಿ
ಬೆಳೆಗಾರರು ಹಾಗೂ ಗ್ರಾಮಸ್ಥರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸೋಮಶೇಖರ್, ರವಿ, ಗೋಪಿನಾಥ್, ತಿಮ್ಮಪ್ಪ, ವೈ.ಜೆ.ಪ್ರಕಾಶ್, ವೈ.ಎನ್.ರಾಮೇಗೌಡ, ಸೋಮೇಗೌಡ, ಶಿವಪ್ಪ, ಸಿ.ಪಿ.ರಮೇಶ್, ಸುಂದ್ರಮ್ಮ,  ಕೃಷ್ಣೇಗೌಡ ಹಾಗೂ ಇತರರು ಇದ್ದರು.


ಬೇಡಿಕೆಗಳು


ಟಿ   ಕಾಡಾನೆಗಳನ್ನು ತಕ್ಷಣ ಸ್ಥಳಾಂತರಿಸಬೇಕು.
ಟಿ   ಕಾಡಾನೆಯಿಂದ ಆದ ಬೆಳೆ ಹಾನಿ 15 ದಿನಗಳ ಒಳಗೆ ನಷ್ಟ ವಿತರಿಸಬೇಕು.
ಟಿ   ಕಾಡಾನೆ ಹಿಡಿದು ಸರ್ಕಾರ ಪೋಷಣೆ ಮಾಡಬೇಕು.
ಟಿ   ಕಾಡಾನೆ  ದಾಳಿಯಿಂದ ಮೃತಪಟ್ಟವರು ಹಾಗೂ ಗಾಯಗೊಂಡವರು ಹಾಗೂ ಆಸ್ತಿ ಹಾನಿಯಾದವರಿಗೆ ತಕ್ಷಣ ನಷ್ಟ  ಭರಿಸಬೇಕು.
ಟಿ   ಕಾಡಾನೆ ಹಿಡಿಯಲು ಆದೇಶ ಬರುವವರೆಗೆ ಅರಣ್ಯಾಧಿಕಾರಿಗಳು ಕಾಡಾನೆಗಳು ರೈತರ ಬೆಳೆಗಳನ್ನು ಹಾನಿ ಪಡಿಸದಂತೆ ರಾತ್ರಿ ಪಾಳಿಯಲ್ಲಿ ಗಸ್ತು ತಿರುಗುವ ವ್ಯವಸ್ಥೆ ಮಾಡಬೇಕು.
ಟಿ   ಈ ಗ್ರಾಮಗಳ ಜನರ ಜೀವನ ಮಟ್ಟ ತೀರಾ ದುಸ್ಥಿತಿಯಲ್ಲಿ ಇದ್ದು, ಇಲ್ಲಿನ ಎಲ್ಲಾ ಜನರಿಗೆ ಬಿಪಿಎಲ್ ಕಾರ್ಡ್ ವಿತರಿಸುವುದು ಹಾಗೂ ಎಲ್ಲಾ ಬಿಪಿಎಲ್ದಾರರಿಗೂ 40ಕೆಜಿ ಅಕ್ಕಿ ವಿತರಿಸಬೇಕು.
ಟಿ   ನ್ಯಾಯಾಲಯದಲ್ಲಿ ವನ್ಯ ಜೀವಿಗಳ ಸಂರಕ್ಷಣೆಗಾಗಿ ಅರ್ಜಿ ಸಲ್ಲಿಸಿರುವ ಪರಿಸರ ವಾದಿಗಳು ಹಾಗೂ ಜಿಲ್ಲಾಧಿಕಾರಿ ಸಂಕಷ್ಟಕ್ಕೆ ಒಳಗಾಗಿರುವ ಈ ಗ್ರಾಮಗಳನ್ನು ಸರ್ವೇ ಮಾಡಿ ಇಲ್ಲಿಯ ಬಡ ರೈತರ ಕಷ್ಟ ವಿಚಾರಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement