ಖಾಸಗಿ ಫೈನಾನ್ಸ್ ಸಂಸ್ಥೆ ವಿರುದ್ಧ ಪ್ರತಿಭಟನೆ
ಚನ್ನರಾಯಪಟ್ಟಣ: ಪಟ್ಟಣದಲ್ಲಿ ಬಡ್ಡಿ ದಂಧೆ ನಡೆಸುತ್ತಿರುವ ಖಾಸಗಿ ಫೈನಾನ್ಸ್ ಸಂಸ್ಥೆಯಿಂದ ಮೋಸವಾಗುತ್ತಿದೆ ಎಂದು ಆರೋಪಿಸಿ ರೈತ ಸಂಘದ ಸದಸ್ಯರು ಹಾಗೂ ಗ್ರಾಹಕರು ಸರ್ಕಲ್ ಇನ್ಸ್ಪೆಕ್ಟರ್ ಕಚೇರಿ ಎದುರು ಧರಣಿ ನಡೆಸಿದರು.
ರಾಜ್ಯ ರೈತ ಸಂಘದ ಕಾರ್ಯದರ್ಶಿ ಆನೆಕೆರೆ ರವಿ ನೇತೃತ್ವದಲ್ಲಿ ರೈತ ಸಂಘದ ಸದಸ್ಯರು ಹಾಗೂ ಗ್ರಾಹಕರು ಸ್ಪಂದನ ಸಂಸ್ಥೆಯಿಂದ ಜನತೆಗೆ ಅನ್ಯಾಯವಾಗಿದ್ದು, ಅವರಿಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿ ಧರಣಿ ನಡೆಸಿದರು. ರಿಸರ್ವ್ ಬ್ಯಾಂಕ್ ಆದೇಶದಂತೆ ಕಡಿಮೆ ಬಡ್ಡಿಯಲ್ಲಿ ಗ್ರಾಹಕರಿಗೆ ಸಾಲ ನೀಡುವುದಾಗಿ ನಂಬಿಸಿ ಕಂತಿನ ಮುಖೇನ ಹೆಚ್ಚು ಬಡ್ಡಿ ವಸೂಲಿ ಮಾಡುತ್ತಿರುವ ಜತೆಗೆ ಸಾಲ ತೆಗೆದುಕೊಂಡವರಿಗೆ ವಿಮೆ ನೀಡುವ ಭರವಸೆ ನೀಡಿ, ಮರಣ ಹೊಂದಿರುವ 23 ಮಂದಿಗೆ ವಿಮೆ ಹಣ ಪಾವತಿ ಮಾಡಿಲ್ಲ ಎಂದು ಆರೋಪಿಸಿದರು. ಪಿಗ್ಮಿ ರೂಪದಲ್ಲಿ ಗ್ರಾಮೀಣ ಜನರಿಂದ ಸಂಗ್ರಹಿಸಿರುವ ಹಣವನ್ನು ಮರುಪಾವತಿ ಮಾಡುವಂತೆ 3 ವರ್ಷಗಳಿಂದ ಒತ್ತಾಯಿಸುತ್ತಿದ್ದರು, ಅದನ್ನು ಸ್ಪಂದನ ಸಂಸ್ಥೆ ವಾಪಸ್ ನೀಡುತ್ತಿಲ್ಲ. 3 ವರ್ಷದಿಂದ ತಾವು ಕಟ್ಟಿರುವ ಹಣಕ್ಕೆ ಬಡ್ಡಿ ಸಮೇತ ವಾಪಸ್ ನೀಡುವಂತೆ ಆಗ್ರಹಿಸಿದರು. ಅಸಲಿನ ಮರುಪಾವತಿ ಮೇಲೆ ಬಡ್ಡಿ ನಿಗದಿ ಮಾಡಲಾಗಿದೆ ಎಂದು ಶೇ.26 ರಷ್ಟು ವರ್ಷಕ್ಕೆ ಬಡ್ಡಿ ವಸೂಲಿ ಮಾಡುತ್ತಿರುವುದು ಅನ್ಯಾಯವಾಗಿದೆ. 13.5ಕ್ಕೆ ನಿಗದಿ ಮಾಡಿ ಗ್ರಾಹಕರಿಂದ ಹಣ ಪಾವತಿ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.