ಸಿಡಿಲು ಬಡಿತ; ಕ್ರೀಡಾಪಟು ಸಾವು: ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ
ಕೋಲಾರ: ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಸಿಡಿಲು ಬಡಿದು ಮೃತಪಟ್ಟ ಖೋ-ಖೋ ರಾಷ್ಟ್ರೀಯ ಆಟಗಾರ ಎನ್.ಬಿ. ಬಾಬು ಕುಟುಂಬಕ್ಕೆ ಅಗತ್ಯ ಪರಿಹಾರ ನೀಡಲು ಒತ್ತಾಯಿಸಿ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆಯ ಶವಾಗಾರದ ಮುಂದೆ ಸೋಮವಾರ ಧರಣಿ ನಡೆಸಿದರು.ಸೂಕ್ತ ಪರಿಹಾರ ಘೋಷಣೆ ಆಗುವವರೆಗೆ ಶವವನ್ನು ಪಡೆಯುವುದಿಲ್ಲವೆಂದು ಮೃತನ ಕುಟುಂಬದವರು ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ರಾಷ್ಟ್ರೀಯ ಕ್ರೀಡಾಪಟುವೊಬ್ಬರು ಸಾವನ್ನಪ್ಪಿದ್ದರೂ, ಈವರೆಗೂ ಕ್ರೀಡಾ ಇಲಾಖೆಯ ಯಾವುದೇ ಅಧಿಕಾರಿ ಇತ್ತ ಸುಳಿದಿಲ್ಲ ಎಂದು ಕಿಡಿಕಾರಿದರು.
2004-05ರಲ್ಲಿ ನಡೆದ ಖೋಖೋ ಪಂದ್ಯಾವಳಿಯಲ್ಲಿ ಬಾಬು ರಾಜ್ಯದಿಂದ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ ಚಿನ್ನದ ಪದಕದ ಸಾಧನೆ ತೋರಿದ್ದ ಈ ಕ್ರೀಡಾಪಟುವಿನ ಕುಟುಂಬ ಸಂಕಷ್ಟದಲ್ಲಿದೆ. ಈತನನ್ನೇ ನಂಬಿ ಜೀವನ ನಡೆಸುತ್ತಿತ್ತು ಎಂದು ಸಂಘಟನೆಗಳ ಮುಖಂಡರು ತಿಳಿಸಿದರು.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಶ್ರೀಹರಿ ಬರಗೂರು, ತಹಸೀಲ್ದಾರ್ ಡಾ. ವೆಂಕಟೇಶ ಮೂರ್ತಿ ಮತ್ತಿತರರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ವಿಫಲ ಯತ್ನ ನಡೆಸಿದರು.ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮೃತನ ಕುಟುಂಬಕ್ಕೆ ಅಗತ್ಯ ಪರಿಹಾರ ಒದಗಿಸುವ ಲಿಖಿತ ಭರವಸೆ ನೀಡಬೇಕೆಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳನ್ನು ಪ್ರತಿಭಟನಾಕಾರೊಬ್ಬರು ದೂರವಾಣಿ ಮೂಲಕ ಸಂಪರ್ಕಿಸಿದಾಗ ನಿಯಮಾನುಸಾರ ಪರಿಹಾರದ ಭರವಸೆ ನೀಡಿದ್ದರಿಂದ ಪ್ರತಿಭಟನೆ ನಿಲ್ಲಿಸಲಾಯಿತು.
ಕ್ರೀಡಾಪಟು ಬಿ. ಸುರೇಶಗೌಡ, ದಲಿತ ಸಂಘಟನೆಗಳ ಟಿ. ವಿಜಯಕುಮಾರ್, ಪಿವಿಸಿ ಕೃಷ್ಣಪ್ಪ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.