ಹೇಮಾವತಿ ನಿರಾಶ್ರಿತರಿಗೆ 6 ತಿಂಗಳಲ್ಲಿ ಪರಿಹಾರಕ್ಕೆ ಆದೇಶ
ಬೆಂಗಳೂರು: ಹಾಸನ ಜಿಲ್ಲೆಯ ಹೊಳೆನರಸೀಪುರದ ಹೇಮಾವತಿ ಎಡದಂಡೆ ಕಾಲುವೆಯ ಶೀತ ಪೀಡಿತ ಪ್ರದೇಶದ ನಿರಾಶ್ರಿತರಿಗೆ ಆರು ತಿಂಗಳಲ್ಲಿ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶಿಸಿದೆ.
ನಿರಾಶ್ರಿತರಿಗೆ ಪರಿಹಾರ ನೀಡುವಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ನ್ಯಾ.ಕೆ.ಎಲ್. ಮಂಜುನಾಥ್ ಹಾಗೂ ನ್ಯಾ. ರವಿ ಮಳಿಮಠ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಹೇಮಾವತಿ ಎಡದಂಡೆ ನಾಲೆ ನಿರ್ಮಾಣದಿಂದ ಅರ್ಜಿದಾರರ ಮನೆಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂಬ ಉನ್ನತ ಸಮಿತಿಯ ವರದಿಯ ಆಧಾರದ ಮೇಲೆ ಆದೇಶವನ್ನು ರದ್ದುಗೊಳಿಸಬೇಕು ಎಂಬ ಸರ್ಕಾರದ ವಾದವನ್ನು ಪರಿಗಣಿಸಲು ನ್ಯಾಯಪೀಠ ನಿರಾಕರಿಸಿದೆ. ನಿರಾಶ್ರಿತರಿಗೆ ಸೂಕ್ತ ಪರಿಹಾರ ನೀಡುವುದು ಸರ್ಕಾರದ ಜವಾಬ್ದಾರಿ. ಅದನ್ನು ಹೊರತುಪಡಿಸಿ ನೆವ ಹೇಳುವುದಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ. ವಿವಾದವೇನು?: ಹೇಮಾವತಿ ಎಡದಂಡೆ ನಾಲೆ ಹಾದು ಹೋಗಿರುವ ಸಮೀಪದ ಹಳ್ಳಿಯ ಮನೆಗಳು ಶೀತಪೀಡಿತವಾಗಿದ್ದು, ಸುಮಾರು 30 ಮನೆಗಳು ಬಿದ್ದು ಹೋಗಿವೆ ಎಂದು ಆಕ್ಷೇಪಿಸಿ ಹುಚ್ಚಯ್ಯ ಮತ್ತಿತರರು 1993ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, 200 ಮೀಟರ್ ವ್ಯಾಪ್ತಿಯಲ್ಲಿ ಈ ರೈತರಿಗೆ ಪುನರ್ವಸತಿ ಕಲ್ಪಿಸುವಂತೆ ಹಾಗೂ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.ಏಕಸದಸ್ಯ ಪೀಠದ ಆದೇಶದಂತೆ ತಾವು ಪುನರ್ವಸತಿ ಕಲ್ಪಿಸಿದ್ದೇವೆ. ಆದರೆ, ಪರಿಹಾರ ನೀಡುವ ಅಗತ್ಯವಿಲ್ಲ. ಏಕೆಂದರೆ, ನಾಲೆ ಹಾದು ಹೋಗಿರುವುದರಿಂದ ಅರ್ಜಿದಾರರ ಮನೆಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ವಸ್ತುಸ್ಥಿತಿಯ ಪರಿಶೀಲನೆ ನಡೆಸಿದ ಉನ್ನತ ಮಟ್ಟದ ಸಮಿತಿ ವರದಿ ನೀಡಿದೆ ಎಂದು ಸರ್ಕಾರ ವಾದಿಸಿತ್ತು.ಇದನ್ನು ಪರಿಗಣಿಸದ ಪೀಠ, 30 ಮನೆಗಳು ಶೀತಪೀಡಿತವಾಗಿ ಬಿದ್ದು ಹೋಗಿವೆ ಎಂಬ ಸತ್ಯಾಂಶ ಕಣ್ಣೆದುರಿದ್ದರೂ, ಯಾವುದೇ ಹಾನಿಯಾಗಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿರುವ ವರದಿಯನ್ನು ಪರಿಗಣಿಸಲಾಗದು ಎಂದು ಸ್ಪಷ್ಟಪಡಿಸಿತಲ್ಲದೆ, ಆರು ತಿಂಗಳಲ್ಲಿ ನಿರಾಶ್ರಿತರಿಗೆ ಪರಿಹಾರ ನೀಡುವಂತೆ ಆದೇಶಿಸಿತು.