ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಕೆಜೆಪಿ ಅಭ್ಯರ್ಥಿ ಬೆಳಗೋಡು ಉಮೇಶ್
ಸಕಲೇಶಪುರ: ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಯಡಿಯೂರಪ್ಪನವರ ನೇತೃತ್ವದ ಕೆಜೆಪಿಯನ್ನು ಬೆಂಬಲಿಸುವಂತೆ ಕೆಜೆಪಿ ಅಭ್ಯರ್ಥಿ ಬೆಳಗೋಡು ಉಮೇಶ್ ಮತದಾರರಿಗೆ ಕರೆ ನೀಡಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ಥಳೀಯನಾದ ನನಗೆ ಕ್ಷೇತ್ರದ ಸಮಸ್ಯೆಗಳ ಸಮಗ್ರ ಅರಿವಿದ್ದು ಈ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು. ಜೆಡಿಎಸ್ ನಾಯಕ ಎಚ್.ಡಿ ರೇವಣ್ಣನವರ ಕೈಗೊಂಬೆಯಾಗಿರುವ ಶಾಸಕ ಎಚ್.ಕೆ ಕುಮಾರಸ್ವಾಮಿ ಕಳೆದ ಐದು ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ. ಹಸಿಸುಳ್ಳುಗಳನ್ನು ಹೇಳುತ್ತಾ, ಬಿಟ್ಟಿ ಪ್ರಚಾರ ಪಡೆಯುತ್ತಿರುವ ಇವರಿಗೆ ಮತದಾರರು ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕೆಂದರು. ಈ ಬಾರಿ ಕ್ಷೇತ್ರದ ಜನತೆ ನನಗೆ ಆಶೀರ್ವದಿಸಿದರೆ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗದ ಕೊರತೆ ನೀಗಿಸುವ ನಿಟ್ಟಿನಲ್ಲಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜುಗಳನ್ನು ಮಂಜೂರು ಮಾಡಿಸಲು ಶಕ್ತಿಮೀರಿ ಯತ್ನಿಸುವೆ ಎಂದು ಭರವಸೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಪರ್ವತಯ್ಯ, ಮಾಜಿ ಪುರಸಭ ಉಪಾಧ್ಯಕ್ಷ ಕಾಡಪ್ಪ, ಕೆಜೆಪಿ ಮುಖಂಡರಾದ ರಾಮಚಂದ್ರೇಗೌಡ, ಬ್ಯಾಕರವಳ್ಳಿ ಬಾಸ್ಕರ್ ಇದ್ದರು.