ತಿಪ್ಪನಹಳ್ಳಿ ಗ್ರಾಮದಲ್ಲಿ ಮಹಾರುದ್ರ ಹೋಮ
ಕ.ಪ್ರ. ವಾರ್ತೆ ಅರಸೀಕೆರೆ ಏ.2
ತಾಲೂಕಿನ ತಿಪ್ಪನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಮಹಾರುದ್ರ ಹೋಮವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಈ ಧಾರ್ಮಿಕ ಕಾರ್ಯಕ್ರಮಕ್ಕೆ ಕೆರಗೋಡಿ ರಂಗಾಪುರದ ಗುರುಪರದೇಶಿ ಕೇಂದ್ರ ಶ್ರೀಗಳು, ವಿರಕ್ತಮಠ ಕುಪ್ಪೂರು ತಮ್ಮಡಿಹಳ್ಳಿಯ ಡಾ. ಅಭಿನವ ಮಲ್ಲಿಕಾರ್ಜುನ ಶ್ರೀಗಳು ಹಾಗೂ ಶಿಡ್ಲೇಹಳ್ಳಿ ಮಹಾಸಂಸ್ಥಾನದ ಇಮ್ಮಡಿ ಕರಿಬಸವದೇಶಿ ಕೇಂದ್ರ ಶ್ರೀಗಳ ಸಮ್ಮುಖದಲ್ಲಿ ಸೋಮವಾರ ಮಹಾರುದ್ರಹೋಮದ ಪೂರ್ಣಾಹುತಿ ನೆರವೇರಿಸಲಾಯಿತು.
ಭಾನುವಾರದಿಂದಲೇ ರುದ್ರಹೋಮದ ಅಂಗವಾಗಿ ಗಣಪತಿ ಪೂಜೆ, ಗಂಗಾಪೂಜೆ, ಸುಮಂಗಲಿಯರಿಂದ 108 ಕುಂಭಕಳಶ ಮೆರವಣಿಗೆ ನವಗ್ರಹ ಮೃತ್ಯುಂಜಯ ಪೂಜೆ ಹಾಗೂ ನಾನಾ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು. ಮಹಾಮಂಗಳಾರತಿಯೊಂದಿಗೆ ಕಳಸ ಸ್ಥಾಪನೆ, ಸಪ್ತಸಭಾ ದೇವತೆ, ಅಷ್ಟದಿಕ್ಪಾಲಕರ ಪೂಜೆ, ನವಗ್ರಹ ಪೂಜೆ, ಮೃತ್ಯುಂಜಯ ಪೂಜೆ, ವಾಸ್ತುಪೂಜೆ ಹಾಗೂ ರಕ್ಷಾ ಬಂಧನ ಕಾರ್ಯಕ್ರಮಗಳೂ ನೆರವೇರಿದವು.
ಮಹಾರುದ್ರ ಹೋಮದ ಅಂಗವಾಗಿ ಗ್ರಾಮವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಸುತ್ತಮುತ್ತಲ ಗ್ರಾಮದೇವತೆಗಳನ್ನು ಆಹ್ವಾನಿಸಿ ಪೂಜೆ ಏರ್ಪಡಿಸಿದ್ದಲ್ಲದೆ ಕೋಡಿಹಳ್ಳಿ ಕೆಲ್ಲೆಂಗೆರೆ ದೇವತೆಗಳ ಸೋಮನಕುಣಿತ ಆಕರ್ಷಕವಾಗಿತ್ತು ಹಾಗೂ ಕರಡೆ ಮಜಲು ಉತ್ಸವಕ್ಕೆ ಮೆರಗು ನೀಡಲಾಗಿತ್ತು.
ಬಸವೇಶ್ವರ ಸ್ವಾಮಿಗೆ ವಿಶೇಷ ಅಲಂಕಾರಗಳಿಂದ ಶೃಂಗರಿಸಲಾಗಿತ್ತು. ಈ ಧಾರ್ಮಿಕ ಕಾರ್ಯಕ್ರಮಕ್ಕೆ ನಾನಾ ಊರುಗಳಿಂದ ಭಕ್ತಾಧಿಗಳು ಪಾಲ್ಗೊಂಡಿದ್ದರು. ಬಂದ ಭಕ್ತಾಧಿಗಳಿಗೆ ದಾಸೋಹವನ್ನು ಏರ್ಪಡಿಸಲಾಗಿತ್ತು.