ನಿವೃತ್ತ ಪೊಲೀಸರಿಗೂ ಆರೋಗ್ಯ ಭತ್ಯೆ ನೀಡಿ
ಕ.ಪ್ರ.ವಾರ್ತೆ ಹಾಸನ ಏ 2
ನಿವೃತ್ತ ಪೊಲೀಸ್ ಸಿಬ್ಬಂದಿಗೂ ಆರೋಗ್ಯ ಭತ್ಯೆ ನೀಡುವಂತೆ ನಿವೃತ್ತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ದಾಸೇಗೌಡ ಆಗ್ರಹಿಸಿದರು.
ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಡೆದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪೊಲೀಸರು ದಿನದ 24 ತಾಸುಗಳ ಕಾಲ ಮನೆ, ಸಂಸಾರವನ್ನು ತೊರೆದು ತಮ್ಮ ಸೇವೆ ಸಲ್ಲಿಸುತ್ತಾರೆ. ಆಗ ಬಹಳ ಕಷ್ಟಪಡುವುದರಿಂದ ಭವಿಷ್ಯದಲ್ಲಿ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿರುವುದರಿಂದ ಇಂಥ ಸೌಲಭ್ಯಗಳನ್ನು ನಿವೃತ್ತರಾದ ಬಳಿಕವೂ ಮುಂದುವರಿಸಬೇಕೆಂದರು.
ಕಲ್ಯಾಣ ನಿಧಿ ಇದೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಮಾತನಾಡಿ, ನಿವೃತ್ತ ಪೊಲೀಸರಿಗೆ ಕಲ್ಯಾಣ ನಿಧಿ ಇದ್ದು, ಇದಕ್ಕೆ ಧ್ವಜವನ್ನು ಮಾರಿ ಬಂದ ಹಣವೇ ಈ ನಿಧಿಗೆ ಆಧಾರ. ಅಷ್ಟೇ ಅಲ್ಲದೆ ನಿವೃತ್ತ ಪೊಲೀಸರಿಗೆ ಪುನರ್ವಸತಿ, ತೋಟಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ, ತಾಂತ್ರಿಕ ವ್ಯವಸಾಯಕ್ಕೆ ಸಾಲ ಸೌಲಭ್ಯಗಳನ್ನು ನೀಡುಲಾಗುವುದು. ಅಲ್ಲದೆ ಅವರ ಶವ ಸಂಸ್ಕಾರಕ್ಕೆ ಧನ ಸಾಹಾಯವನ್ನು ನೀಡಲಾಗುತ್ತಿದೆ ಎಂದರು.
2012ನೇ ಸಾಲಿನಲ್ಲಿ 225 ಅರ್ಜಿಗಳು ಬಂದಿದ್ದು, 3.75 ಲಕ್ಷ ಧನ ಸಹಾಯ ಮಾಡಲಾಗಿದೆ. ಕಠಿಣ ಶ್ರಮದಿಂದ ಇಲಾಖೆಯಲ್ಲಿ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಜೀವನದ ಅರ್ಧ ಭಾಗವನ್ನು ಜನರ ಸೇವೆಗಾಗಿಯೇ ಮೀಸಲಿಟ್ಟಿರುವುದನ್ನು ನಾವು ನೆನೆಯುವುದು ಎಲ್ಲರ ಹೊಣೆಗಾರಿಕೆ ಎಂದರು.
1965ರಿಂದ ಏ.2ರಂದು ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದ ಅವರು, ಧ್ವಜದ ಹಿಂದಿನ ಮಹತ್ವವನ್ನು ಅರಿತು ಸಹಾಯ ಮಾಡುವಂತೆ ಮನವಿ ಮಾಡಿದರು. ಇದಕ್ಕೂ ಮೊದಲು ಪೊಲೀಸ್ ತುಕಡಿಗಳು ಆಕರ್ಷಕ ಪಥ ಸಂಚಲನ ನಡೆಸಿ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಅತಿಥಿಗಳಿಗೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಮಾರ್ಟಿನ್ ಇದ್ದರು.