ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮತ ಅರಿವು ಮೂಡಿಸಲು ಜಾಥಾ

Rashmi Kasaragodu
Updated On : 3 Apr 2013, 12:53 pm

ಕ.ಪ್ರ.ವಾರ್ತೆ  ಹಾಸನ  ಏ. 2
ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾಲ್ನಡಿಗೆ ಜಾಥಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡಲಾಯಿತು.
ಜಿಲ್ಲಾಧಿಕಾರಿ ಕೆ.ಪಿ. ಮೋಹನ್ ಕುಮಾರ್ ತಮಟೆ ಬಾರಿಸುವ ಮೂಲಕ ಜಾಥಕ್ಕೆ ಚಾಲನೆ ನೀಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಜಾಥ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಮತದಾನ ಕುರಿತು ಕಲಾವಿದರು ಪ್ರದರ್ಶಿಸಿದ ಬೀದಿ ನಾಟಕ ಮತ್ತು ಜಾನಪದ ವಾದ್ಯ ಮೇಳ ಕಣ್ಮನ ಸೆಳೆಯಿತು. ಕಾಲೇಜು ವಿದ್ಯಾರ್ಥಿಗಳು, ಸ್ತ್ರೀಶಕ್ತಿ ಸಂಘಗಳ ಸದಸ್ಯರು ಹಿಡಿದು ಸಾಗಿದ ಘೋಷಣಾ ಫಲಕಗಳು ಹಾಗೂ ವಾರ್ತಾ ಇಲಾಖೆ ಸಂಚಾರಿ ವಾಹನಕ್ಕೆ ಅಳವಡಿಸಿದ್ದ ಚುನಾವಣೆಗೆ ಸಂಬಂಧಿಸಿದ ಮಾಹಿತಿ ನೋಡುಗರನ್ನು ಆಕರ್ಷಿಸುವ ಜತೆಗೆ ಮತದಾನಕ್ಕೆ ಪ್ರೇರೇಪಣೆ ನೀಡಿದವು.
ಯುವಜನತೆ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಸ್ವಇಚ್ಛೆಯಿಂದ ಮತ ಚಲಾಯಿಸಲು ಹುರಿದುಂಬಿಸುವಲ್ಲಿ ಜಾಥಾ ಕಾರ್ಯಕ್ರಮ ಸಹಕಾರಿಯಾಯಿತು. ನಾನಾ ಕಲಾ ತಂಡಗಳು ಅಧಿಕಾರಿ ನೌಕರರ ದಂಡು ನಾನಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆಯಿಂದ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.
ಕಡ್ಡಾಯ ಮತಕ್ಕೆ ಪ್ರೇರಣೆ: ರಾಜ್ಯ ವಿಧಾನಸಭೆಗೆ 2013ರ ಮೇ.5ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಹಾಕುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆದ ಮೋಹನ್ ಕರೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮತದಾನ ಕುರಿತು ಜನರಿಗೆ ಜಾಗೃತಿ ಮೂಡಿಸಲು ವಿಶೇಷವಾಗಿ ರಚನೆಯಾಗಿರುವ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾಕ್ಕೆ  ಚಾಲನೆ ನೀಡಿ ಮಾತನಾಡಿದ ಡಿಸಿ, ಯಾವುದೇ ಮತದಾರನು ತನ್ನ ಹಕ್ಕಿನಿಂದ ವಂಚಿತನಾಗದಂತೆ ಎಚ್ಚರವಹಿಸಲಾಗುತ್ತಿದೆ. ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳ್ಳಬಯಸುವವರು ಏ.7ರೊಳಗೆ ಸಂಬಂಧಪಟ್ಟ ತಹಸೀಲ್ದಾರರ ಕಚೇರಿಗೆ ನಮೂನೆ 6ರಲ್ಲಿ ಅರ್ಜಿ ಸಲ್ಲಿಸಬೇಕು. ಅಲ್ಲದೇ ಪಟ್ಟಿಯಲ್ಲಿ ಹೆಸರಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕೆಂದರು.
ಗ್ರಾಮೀಣ ಜನರಿಗಿಂತ ನಗರದ ಸುಶಿಕ್ಷಿತರೇ ಮತದಾನದಿಂದ ದೂರ ಉಳಿಯುತ್ತಿದ್ದು, ತಮ್ಮ ಮತದಾನದ ಮಹತ್ವವನ್ನು ನಾಗರಿಕರು ಅರಿತು ಮತ ಚಲಾಯಿಸುವಂತೆ ತಿಳಿಸಿದರು.
ಜಾಗೃತಿ ಕಾರ್ಯಕ್ರಮ: ಸ್ವೀಪ್ ಕಾರ್ಯಕ್ರಮದಡಿ ಜಿಲ್ಲೆಯ ಆಯ್ದ ಪ್ರದೇಶಗಳಲ್ಲಿ ವಾರ್ತಾ ಇಲಾಖೆ ಸಂಚಾರಿ ವಾಹನ ಬೀದಿ ನಾಟಕದ ತಂಡದೊಂದಿಗೆ ಸಂಚರಿಸಿ ಮತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಿದೆ. ಮತದಾನದ ಮಹತ್ವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕ ಪ್ರದರ್ಶಿಸಲಾಯಿತು. ಕರಪತ್ರ ವಿತರಣೆ, ಪ್ಲೇಕಾರ್ಡ್ ಪ್ರದರ್ಶಿಸಿ ಜನರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲಾಯಿತು.
ಮತದಾರರ ಜಾಗೃತಿಗಾಗಿ ಏರ್ಪಡಿಸಿದ್ದ ಸ್ತಬ್ಧಚಿತ್ರ ಎಲ್ಲರನ್ನೂ ಆಕರ್ಷಿಸಿತ್ತು. ನಾನಾ ಚಲನಚಿತ್ರ ನಟ ನಟಿಯರು ಸೇರಿದಂತೆ ಮತದಾನಕ್ಕೆ ಗಣ್ಯರು ನೀಡಿರುವ ಕರೆಯ ಧ್ವನಿ ಮುದ್ರಣವನ್ನು ಧ್ವನಿವರ್ಧಕಗಳ ಮೂಲಕ ಪ್ರಸ್ತುತಪಡಿಸಲಾಯಿತು.
ಇದೇ ವೇಳೆ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳುವ 18 ವರ್ಷ ತುಂಬಿದ ಯುವಕ, ಯುವತಿಯರಿಗೆ ನಮೂನೆ 6ನ್ನು ವಿತರಿಸಿ ಭರ್ತಿ ಮಾಡಿ ಸ್ವೀಕರಿಸುವ ಕಾರ್ಯವೂ ನಡೆಯಿತು.
ಡಿಸಿ ಕಚೇರಿ ಆವರಣದಿಂದ ಹೊರಟ ಕಾಲ್ನಡಿಗೆ ಜಾಥಾದಲ್ಲಿ ಡಿಸಿ ಮೋಹನ್ರಾಜ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಉಪವಿಭಾಗಾಧಿಕಾರಿ ಜಗದೀಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ಯಾಮಲಾದೇವಿ, ತಹಸೀಲ್ದಾರ್ ಮಂಜುನಾಥ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ರಾಮಚಂದ್ರ ಹಾಗೂ ನಾನಾ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಸಂಘ ಸಂಸ್ಥೆಗಳ ಕಾರ್ಯಕತಂರು, ಕಾಲೇಜು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement