ಚೆಕ್ ಕಳವು ಪ್ರಕರಣ: ಗ್ರಾಪಂಗೆ ರು. 1.47 ಲಕ್ಷ ಹಿಂದಿರುಗಿಸಿ ಹಗರಣ ಮುಚ್ಚಿ ಹಾಕಲು ಯತ್ನ
ಕ.ಪ್ರ.ವಾರ್ತೆ ಸಕಲೇಶಪುರ ಏ.3
ಇಂದಿರಾ ಆವಾಸ್ ಯೋಜನೆಯ ಚೆಕ್‌ನ್ನು ಕಳವು ಮಾಡಿ ಅಪಾರ ಮೊತ್ತದ ಹಣವನ್ನು ಬ್ಯಾಂಕಿನಿಂದ ಪಡೆದಿದ್ದ ಮಂದಿ ಮತ್ತೆ ಹಣವನ್ನು ಗ್ರಾಪಂಗೆ ವಾಪಸ್ ಮಾಡಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿರುವ ಘಟನೆ ಕ್ಯಾನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ.
ಕ್ಯಾನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ವಾರ್ಷಿಕ ಲೆಕ್ಕಪತ್ರ ಪರಿಶೀಲಿಸುವ ಸಂದರ್ಭದಲ್ಲಿ ಇಂದಿರಾ ಆವಾಜ್ ಯೋಜನೆಯ ಭಾರೀ ಮೊತ್ತದ ಹಣಕ್ಕೆ ಲೆಕ್ಕಸಿಗದ ಸಂದರ್ಭದಲ್ಲಿ ಚೆಕ್‌ಗಳನ್ನು ಪರಿಶೀಲನೆ ನಡೆಸಿದಾಗ ಚೆಕ್ ಕೌಂಟರ್ ಫೈಲ್ ಕಾಣದಂತೆ ಕಿತ್ತು 1,47,600 ರು.ಗಳನ್ನು ಪಟ್ಟಣದ ಕರ್ಣಾಟಕ ಬ್ಯಾಂಕಿನಿಂದ, ತಾಲೂಕಿನ ಕೆಸಗಾನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ಗ್ರಾಮಾಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರ ನಕಲಿ ಸಹಿ ಮಾಡಿ ಹಣವನ್ನು ಡ್ರಾ ಮಾಡಿರುವುದನ್ನು ಪತ್ತೆ ಮಾಡಲಾಯಿತು. ಈ ಬಗ್ಗೆ ಗ್ರಾಪಂ ಅಧಿಕಾರಿಗಳು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಠಾಣೆಯಲ್ಲಿ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಆರೋಪಿಗಳು ಡ್ರಾ ಮಾಡಿದ ಹಣವನ್ನು ಗ್ರಾಪಂಗೆ ಹಿಂದಿರುಗಿಸುವ ಮೂಲಕ ಈ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂಬುದು ಕ್ಯಾನಹಳ್ಳಿ ಗ್ರಾಮಸ್ಥರ ಆರೋಪ. ಚೆಕ್ ಕಳವು ಹಿಂದೆ ಗ್ರಾಪಂ ಮಾಜಿ ಅಧ್ಯಕ್ಷ ಸೇರಿದಂತೆ ಪ್ರಭಾವಿಗಳ ಕೈವಾಡವಿದ್ದು ನಿಜವಾದ ಆರೋಪಿಯನ್ನು ಬಂಧಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಪತ್ರಿಕೆಗೆ ತಿಳಿಸಿದ್ದಾರೆ.
ಹೇಳಿಕೆ: ಕಳವು ಮಾಡಿದ್ದ ಚೆಕ್ಕನ್ನು ಗ್ರಾಮಾಭಿವೃದ್ಧಿ ಅಧಿಕಾರಿ ಹಾಗೂ ಗ್ರಾಪಂ ಅಧ್ಯಕ್ಷ ನಕಲಿ ಸಹಿ ಮಾಡಿ ಹಣ ಡ್ರಾ ಮಾಡಲಾಗಿದೆ ಎನ್ನಲಾಗುತ್ತಿದ್ದರೂ, ನಕಲಿ ಸಹಿ ಪತ್ತೆ ಮಾಡಲು ತನಿಖೆ ನಡೆಸಲಾಗುತ್ತಿದೆ ಎಂದು ತಾಪಂ ಕಾರ್ಯ ನಿರ್ವಾಹಣಾಧಿಕಾರಿ ಸಿದ್ದರಾಜು ತಿಳಿಸಿದ್ದಾರೆ.