ಪಕ್ಷಾಂತರ ಪರ್ವದ ನಡುವೆಯೇ ರಾಜಕಾರಣ
ಹಾಸನ: ಏಲಕ್ಕಿ, ಕಾಫಿ, ಮೆಣಸಿನ ನಾಡು ಎಂಬ ಖ್ಯಾತಿಯ ಸಕಲೇಶಪುರ ಮೀಸಲು ಕ್ಷೇತ್ರದಲ್ಲಿ ಪಕ್ಷಾಂತರವೇ ನಡೆದಿದೆ. ಇಲ್ಲಿ ಗುರುತಿಸಿಕೊಂಡ ಬಹುತೇಕ ರಾಜಕಾರಣಿಗಳು ಪಕ್ಷದಿಂದ ಪಕ್ಷಕ್ಕೆ ನೆಗೆದು ತಮ್ಮ ರಾಜಕೀಯ ಅಸ್ತಿತ್ವ ಕಂಡುಕೊಳ್ಳಲು ಯತ್ನಿಸಿ ವಿಫಲರಾಗಿರುವುದು ಉಂಟು, ಹಾಗೆಯೇ ಯಶಸ್ಸಿಯಾಗಿರುವುದು ಉಂಟು.
ಪಶ್ಚಿಮಘಟ್ಟಗಳ ಸೆರಗಿನಲ್ಲಿರುವ ಸಕಲೇಶಪುರ ಕ್ಷೇತ್ರಕ್ಕೆ ಹಾಸನ ತಾಲೂಕು ವ್ಯಾಪ್ತಿಯ ಕಟ್ಟಾಯ ಹೋಬಳಿ ಕ್ಷೇತ್ರ ಪುನರ್‌ವಿಂಗಡಣೆಯಾದಾಗ ಸೇರಿದ ನಂತರ ಅಪ್ಪಟ್ಟ ಮಲೆನಾಡು ಕ್ಷೇತ್ರ ಎಂಬುದರ ಜೊತೆಗೆ ಬಯಲು ಸೀಮೆ ಪ್ರದೇಶವನ್ನು ಹೊಂದಿರುವ ಕ್ಷೇತ್ರವಾಯಿತು. ಹೀಗಾಗಿ ಏಲಕ್ಕಿ, ಮೆಣಸು, ಕಾಫಿ ಬೆಳೆಗಾರರಲ್ಲದೇ ಆಲೂಗಡ್ಡೆ ಬೆಳೆಯುವ ರೈತರು ಈ ಕ್ಷೇತ್ರಕ್ಕೆ ಸೇರ್ಪಡೆಯಾದರು.
ಕಟ್ಟಾಯ ಹೋಬಳಿ ಸೇರಿದ ನಂತರ ಆ ಕ್ಷೇತ್ರದಲ್ಲಿ ಒಕ್ಕಲಿಗರ ಸಂಖ್ಯೆಯೂ ಹೆಚ್ಚಾಯಿತು. ಪಕ್ಷಾಂತರದ ಪರ್ವವೇ ಇಲ್ಲಿ ನಡೆದಿದೆ. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಹಾಲಿ ವಿಧಾನ ಪರಿಷತ್ ಸದಸ್ಯ ಬಿ.ಬಿ. ಶಿವಪ್ಪ ಬಿಜೆಪಿಯೊಳಗೆ ತಮ್ಮನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳುತ್ತಿಲ್ಲ ಎಂದು ಅಸಮಾಧಾನಗೊಂಡು ಬಿಜೆಪಿಗೆ ರಾಜಿನಾಮೆ ನೀಡಿ ಕಾಂಗ್ರೆಸ್‌ನಿಂದ 2004 ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. ಅವರ ವಿರುದ್ಧ ಪ್ರಥಮ ಬಾರಿಗೆ ಜೆಡಿಎಸ್‌ನಿಂದ ಎಚ್.ಎಂ. ವಿಶ್ವನಾಥ್ ಗೆದ್ದರು.
ಹೀಗೆ ಜೆಡಿಎಸ್‌ನಿಂದ ವಿಶ್ವನಾಥ್ ಈಗ ಕೆಜೆಪಿಗೆ ಹಾರಿ, ಬೇಲೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಹಾಗೆಯೇ 1989 ಮತ್ತು 1999 ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು- ಗೆಲುವನ್ನು ಕಂಡಿದ್ದ ಬಿ.ಆರ್. ಗುರುದೇವ್ ಜೆಡಿಎಸ್‌ಗೆ ಪಕ್ಷಾಂತರ ಮಾಡಿ ವಿಧಾನ ಪರಿಷತ್ ಸದಸ್ಯರಾದರು. ಈಗ ಜೆಡಿಎಸ್‌ಗೂ ಗುಡ್ ಬೈ ಹೇಳಿ ಕೆಜೆಪಿ ಸೇರಿ ರಾಜಕಾರಣ ಮಾಡುತ್ತಿದ್ದಾರೆ.
2 ತಿಂಗಳಲ್ಲಿ ಪಕ್ಷ ಬದಲಾವಣೆ: ಈಗ ಬಿಜೆಪಿಯಿಂದ ಸ್ಪರ್ಧಿಸಲು ಮುಂದಾಗಿರುವ ಡಾ. ನಾರಾಯಣಸ್ವಾಮಿ 2 ತಿಂಗಳ ಹಿಂದಷ್ಟೇ ಕೆಜೆಪಿಗೆ ಸೇರಿದ್ದರು. ಈಗ ಮತ್ತೆ ಬಿಜೆಪಿಗೆ ಮರಳಿದ್ದಾರೆ. ಹೀಗೆ ಸಕಲೇಶಪುರ ಕ್ಷೇತ್ರದಲ್ಲಿ ಹಿಂದಿನಿಂದ ಇಂದಿನವರೆಗೆ ಪಕ್ಷಾಂತರ ರಾಜಕಾರಣವೇ ನಡೆದಿದೆ, ನಡೆಯುತ್ತಿದೆ.
ಮೀಸಲು ಕ್ಷೇತ್ರ ಆಗೋವರೆಗೂ ಈ ಕ್ಷೇತ್ರದಲ್ಲಿ ಸ್ಥಳೀಯರೇ ಚುನಾಯಿತರಾಗುತ್ತಿದ್ದರು. ಈಗ ಬೇರೆ ಕ್ಷೇತ್ರದಲ್ಲಿ ಗೆದ್ದು ಸೋತವರು ಅಭ್ಯರ್ಥಿಯಾಗುತ್ತಿದ್ದಾರೆ. ಬೇಲೂರು ಮೀಸಲು ಕ್ಷೇತ್ರವಾಗಿದ್ದಾಗ ಅಲ್ಲಿಂದ ಸ್ಪರ್ಧಿಸಿದ್ದ ಗೆಲ್ಲುತ್ತಿದ್ದ ಜೆಡಿಎಸ್ ಶಾಸಕ ಎಚ್.ಕೆ.ಕುಮಾರಸ್ವಾಮಿ 2008 ರ ಚುನಾವಣೆಯಲ್ಲಿ ಸಕಲೇಶಪುರ ಕ್ಷೇತ್ರದಿಂದ ಜೆಡಿಎಸ್‌ನಿಂದ ಚುನಾಯಿತರಾದರು.
2013 ರ ಚುನಾವಣೆಯಲ್ಲಿ ಅವರೇ ಜೆಡಿಎಸ್ ಅಭ್ಯರ್ಥಿ. ಈಗ ಕಾಂಗ್ರೆಸ್‌ನಿಂದ ಬೇಲೂರು ಕ್ಷೇತ್ರ ಶಾಸಕರಾಗಿದ್ದ ಡಿ. ಮಲ್ಲೇಶ್ ಅವರಿಗೆ ಟಿಕೆಟ್ ಸಿಗುವುದು ಖಚಿತ ಎಂದು ಹೇಳಲಾಗುತ್ತಿದೆ. ಹಾಗಾಗಿ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂಬ ಕೂಗು ಅರಣ್ಯರೋದನವಾಗಿದೆ ಎಂಬ ಅಸಮಾಧಾನ ಉಂಟಾಗಿದೆ.
ವೀಕ್ಷಕರಾಗಿ ಬಂದು ಅಭ್ಯರ್ಥಿಯಾಗಲೆತ್ನ: ಹಿಂದೆ ನಡೆದ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಪಕ್ಷದ ವೀಕ್ಷಕರಾಗಿ ಸಕಲೇಶಪುರಕ್ಕೆ ಬಂದ ಮಾಜಿ ಸಚಿವೆ ಮೋಟಮ್ಮ ಈ ಕ್ಷೇತ್ರದ ಅಭ್ಯರ್ಥಿಯಾಗಲು ಮುಂದಾಗಿದ್ದಾರೆ. ಇದಕ್ಕೆ ಸ್ಥಳೀಯ ಕೆಲವು ಸಾಥ್ ನೀಡುತ್ತಿದ್ದಾರೆ. ಜನರೇನು ಬಯಸಿಲ್ಲ. ಆದರೆ ಕೆಲ ಮುಖಂಡರು ಮೋಟಮ್ಮ ನಿಂತರೇ ಆರ್ಥಿಕ ತೊಂದರೆಯಾಗದು. ರಾಜ್ಯದಲ್ಲಿ ಕಾಂಗ್ರೆಸ್ ಬಂದರೆ ಮೋಟಮ್ಮ ಮಂತ್ರಿಯಾಗುತ್ತಾರೆ. ಆಗ ತಮಗೂ ಸ್ಥಾನ ಮಾನಗಳೆರಡು ಸಿಗಬಹುದು ಎಂಬ ದೂರದೃಷ್ಟಿಯಿಂದ ಮೋಟಮ್ಮರನ್ನು ಕರೆ ತರಲು ಮುಂದಾಗಿದ್ದಾರೆ ಎಂದು ಕೂಡ ಟೀಕಿಸಲಾಗುತ್ತಿದೆ.
ಬಿಜೆಪಿಯಿಂದ ಡಾ. ನಾರಾಯಣಸ್ವಾಮಿ, ಆಲೂರಿನ ಸಂಜಯಬಾಬು, ಮಾಸವಳ್ಳಿ ಚಂದ್ರು, ಬಿಎಸ್ಪಿಯಿಂದ ಕುಮಾರಗೌರವ್, ಲಕ್ಷಣ ಕೀರ್ತಿ ಸ್ಪರ್ಧಿಸಲು ಮುಂದಾಗಿದ್ದಾರೆ. ಕೆಜೆಪಿಯಿಂದ ಬೆಳಗೋಡು ಉಮೇಶ್ ಹುರಿಯಾಳು. ಈ ಕ್ಷೇತ್ರದ ಪ್ರಮುಖ ಜ್ವಲಂತ ಸಮಸ್ಯೆಯೆಂದರೆ ಕಾಡಾನೆಗಳ ಕಾಟ. ಜೊತೆಗೆ ನಕ್ಸಲರು ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.
ಯಾರು, ಯಾವಾಗ, ಯಾರ ವಿರುದ್ದ ಸೋತಿದ್ದರು, ಗೆದ್ದಿದ್ದರು ?
- 1978 ರಲ್ಲಿ ಕಾಂಗ್ರೆಸ್ನ ಜೆ.ಡಿ. ಸೋಮಪ್ಪ 32, 658 ಮತ ಪಡೆದು ಗೆದ್ದಿದ್ದರೇ, ಜನತಾಪಕ್ಷದಿಂದ ಸ್ಪರ್ಧಿಸಿದ್ದ ಬಿ.ಬಿ. ಶಿವಪ್ಪ 22, 361 ಪಡೆದು ಸೋತಿದ್ದರು.
- 1983 ರಲ್ಲಿ ಕಾಂಗ್ರೆಸ್ನ ಜೆ.ಡಿ.ಸೋಮಪ್ಪ 25,778 ಮತ ಪಡೆದು ಪುನಾರಾಯ್ಕೆಯಾದರೇ, ಬಿಜೆಪಿಯ ಎಂ.ಟಿ. ಮಂಜುನಾಥ್ 21,253 ಮತ ಪಡೆದು ಪರಾಜಿತರಾದರು.
- 1985ರಲ್ಲಿ ಜನತಾಪಕ್ಷದ ಅಭ್ಯರ್ಥಿಯಾಗಿದ್ದ ಬಿ.ಡಿ.ಬಸವರಾಜು 46,574 ಮತ ಪಡೆದು ಗೆದ್ದರೇ, ಕಾಂಗ್ರೆಸ್ನ ಎಚ್.ಬಿ. ಬಸವರಾಜು 24,440 ಮತ ಪಡೆದು ಸೋತಿದ್ದರು.
- 1989 ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಿ.ಆರ್. ಗುರುದೇವ್ 40,039 ಮತ ಪಡೆದು ಗೆದ್ದರೇ, ಜನತಾಪಕ್ಷದಿಂದ ಸ್ಪರ್ಧಿಸಿದ್ದ ಎಚ್.ಬಿ. ಯಜಮಾನ್ 34,025 ಮತ ಪಡೆದು ಪರಾಜಯಗೊಂಡರು.
- 1994 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ಬಿ. ಶಿವಪ್ಪ 40,761 ಮತ ಪಡೆದು ಗೆದ್ದರೇ, ಕಾಂಗ್ರೆಸ್ನ ಜೆ.ಡಿ.ಸೋಮಪ್ಪ 29,852 ಮತ ಪಡೆದು ಸೋತರು.
- 1999 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ಬಿ. ಶಿವಪ್ಪ 31,702 ಮತ ಪಡೆದು ಮತ್ತೆ ಗೆದ್ದರೇ, ಕಾಂಗ್ರೆಸ್ ನಿಂದ ಕಣಕ್ಕೆ ಇಳಿದಿದ್ದ ಬಿ.ಆರ್. ಗುರುದೇವ್ 30,358 ಮತ ಪಡೆದು ಸೋತರು.
- 2004 ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಚ್.ಎಂ. ವಿಶ್ವನಾಥ್ 41,704 ಮತ ಪಡೆದು ಗೆದ್ದರೇ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಿ.ಬಿ. ಶಿವಪ್ಪ 19,911 ಮತ ಪಡೆದು ಸೋತರು.
- 2008ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಚ್.ಕೆ.ಕುಮಾರಸ್ವಾಮಿ 49,768 ಮತ ಪಡೆದು ಜಯಗಳಿಸಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ನಿರ್ವಾಣಯ್ಯ 36,473 ಮತ ಪಡೆದು ಸೋಲು ಅನುಭವಿಸಿದ್ದರು.