ಪಶು ವೈದ್ಯಕೀಯ ಮಹಾವಿದ್ಯಾಲಯ ವಾರ್ಷಿಕೋತ್ಸವ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಹಾಸನ ಏ.3
ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಸಕ್ರಿಯರಾಗಿ ಭಾಗವಹಿಸಬೇಕು. ವಿದ್ಯಾರ್ಥಿಗಳು ಒಂದು ವಿದ್ಯಾ ಸಂಸ್ಥೆಯ ಮತ್ತು ಸಮಾಜದ ಬಹು ಮುಖ್ಯ ಅಂಗವೆಂದು ಪಶು ವೈದ್ಯಕೀಯ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ಶಂಕರೇಗೌಡ ತಿಳಿಸಿದರು.
ಹಾಸನ ಪಶು ವೈದ್ಯಕೀಯ ಮಹಾವಿದ್ಯಾಲಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದ ಅಮೂಲ್ಯ ಕ್ಷಣಗಳನ್ನು ಸಾರ್ಥಕ ಪಡಿಸಿಕೊಳ್ಳ ಬೇಕು ಎಂದರು.
ಜೈವಿಕ ಇಂಧನ ಮಂಡಳಿ ಸದಸ್ಯ ಅತ್ತಿಹಳ್ಳಿ ದೇವರಾಜ್ ಮಾತನಾಡಿ, ಭಾವಿ ಪಶುವೈದ್ಯರಾಗುವ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ರೈತ ಮತ್ತು ಪ್ರಾಣಿಮುಖಿ ಅನುಭವ ಪಡೆಯುವುದು ಮುಖ್ಯವಾಗುತ್ತದೆ ಇದನ್ನು ಪಡೆಯಲು ವಿದ್ಯಾರ್ಥಿ ಬದುಕಿನಲ್ಲಿಯೆ ಗ್ರಾಮ ಹಾಗೂ ಕಾಡುಗಳನ್ನು ಸುತ್ತಾಡಬೇಕೆಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಪಶು ವೈದ್ಯಕೀಯ ಕಾಲೇಜಿನ ಪ್ರಭಾರಿ ಡೀನ್ ಡಾ ಆರ್.ಡಿ ಪಡಲ್ಕರ್ ಕಾಲೇಜಿನ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಭೂತೇಶ್ ವರದಿ ಮಂಡಿಸಿದರು. ಶರ್ಮಿಳಾ ವರದಿ ಓದಿದರು. ನಾನಾ ಕ್ರೀಡಾ ಮತ್ತು ಸಾಂಸ್ರ್ಖತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾ ಪ್ರಾರ್ಥಿಸಿದರು. ಡಾ. ಇಂದ್ರೇಶ್ ಸ್ವಾಗತಿಸಿದರು. ಮುಖ್ಯ ನಿಲಯ ಪಾಲಕ ಡಾ. ಜಿ ಎಂ ಜಯರಾಮು ವಂದಿಸಿದರು. ಕೆ.ಎನ್. ಚಂದನ್ ಕಾವೇರಿ ನಿರೂಪಿಸಿದರು.