ಬಸ್, ಕಾರು ಡಿಕ್ಕಿ: ಬಾಲಕ ಸೇರಿ ಮೂವರ ಸಾವು
ಕನ್ನಡಪ್ರಭ ವಾರ್ತೆ ಹಾಸನ ಏ. 3
ರಾಜ್ಯ ಸಾರಿಗೆ ಬಸ್ ಹಾಗೂ ಕಾರು ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಬಾಲಕ ಸೇರಿದಂತೆ ಮೂವರು ಮೃತಪಟ್ಟು ನಾಲ್ವರು ಗಾಯಗೊಂಡಿರುವ ದುರ್ಘಟನೆ ತಾಲೂಕಿನ ಶಾಂತಿಗ್ರಾಮ ಸಮೀಪದ ರಂಗನಾಥಪುರ ಗೇಟ್ ಬಳಿ ಬುಧವಾರ ರಾತ್ರಿ ನಡೆದಿದೆ.
ಬೆಂಗಳೂರಿನ ಬಸವೇಶ್ವರ ನಗರದ ಎನ್.ಎಸ್. ಪಾಳ್ಯ ನಿವಾಸಿಗಳಾದ ಶ್ರೀನಿವಾಸ್ (45 ) ಮತ್ತು ಅವರ ಪತ್ನಿ ವನಜಾ (37) ಹಾಗೂ 12 ವರ್ಷ ವಯಸ್ಸಿನ ಪುತ್ರ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೃತ ಶ್ರೀನಿವಾಸ್ ಅವರ ತಂದೆ ಚಿನ್ನಪ್ಪ ಮತ್ತು ಅವರ ಸಂಬಂಧಿಕರು ಹಾಗೂ ಮೂವರು ಬಾಲಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹಾಸನದ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀನಿವಾಸ್ ಅವರು ಬೆಂಗಳೂರಿನಿಂದ ಮಂಗಳೂರಿಗೆ ಮಾರುತಿ ಓಮಿನಿ ವ್ಯಾನ್ನಲ್ಲಿ ಬುಧವಾರ ರಾತ್ರಿ 8.45 ರಲ್ಲಿ ಹೋಗುತ್ತಿದ್ದರು. ಹಾಸನ ಕಡೆಯಿಂದ ಬಂದ ಸಾರಿಗೆ ಬಸ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ.
ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿತ್ತು. ರಸ್ತೆ ಕಿರಿದಾದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಶಾಂತಿಗ್ರಾಮ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ