ಭೂ ಮಾಫಿಯಾಗಳಿಂದ ಅಪಪ್ರಚಾರ: ರೇವಣ್ಣ
ಕನ್ನಡಪ್ರಭ ವಾರ್ತೆ ಹಾಸನ ಏ.3
ಜಿಲ್ಲೆಯಲ್ಲಿ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಭೂ ಮಾಫಿಯಾ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಟೀಕಾ ಪ್ರಹಾರ ನಡೆಸಿದರು.
ತಮ್ಮ ವಿರುದ್ಧ ಇಲ್ಲಸಲ್ಲದೆ ಸುಳ್ಳು ಆರೋಪಗಳಿರುವ ಕರಪತ್ರಗಳನ್ನು ಹಂಚಿದ್ದಾರೆ. ಜೆಡಿಎಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ದಾಸರಕೊಳ್ಳಲು, ಕೃಷ್ಣನಗರದ ಸೇರಿದಂತೆ ರೈತರ ಭೂಸ್ವಾಧೀನ ಪಡಿಸಿಕೊಂಡಿಲ್ಲ. ರೈತರ ಒಪ್ಪಿಗೆ ಪಡೆದು ನಂತರ ಕೆಲ ಭೂಮಿಯನ್ನು ರೈತರಿಂದ ಪಡೆಯಲಾಗಿತ್ತು. ಆದರೆ ಈಗ ಆ ಭೂಮಿಗಳನ್ನು ಭೂ ಮಾಫಿಯಾದವರು ದುರ್ಬಳಕೆ ಮಾಡಿಕೊಂಡು ರೈತರಿಗೆ ಅನ್ಯಾಯ ಎಸಗುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಬಡವರಿಗಾಗಿ ಎಸ್.ಎಂ.ಕೃಷ್ಣನಗರದ ಭೂಮಿಯನ್ನು ನಿವೇಶನವಾಗಿ ಪರಿವರ್ತಿಸಲಾಗಿತ್ತು. ಆದರೀಗ ಬಡವರಿಗೆ ಬದಲಾಗಿ ಭೂ ಮಾಫಿಯಾದವರ ಪಾಲಾಗುತ್ತಿದೆ ಹಾಗೂ ನಗರದ ಹೌಸಿಂಗ್ ಬೋರ್ಡ್‌ನಲ್ಲಿ 500 ರು. ಇದ್ದ ದರ ಪ್ರಸ್ತುತ 2 ಸಾವಿರ ರು.ಗಳಿಗೆ ಏರಿಕೆಯಾಗಿದೆ. ನಾವು ಯಾವತ್ತೂ ರೈತರ ವಿರೋಧವಾಗಿ ಕೆಲಸ ಮಾಡಿಲ್ಲ. ಭೂ ಮಾಫಿಯಾದವರು ತಮ್ಮ ವಿರುದ್ಧ ಸುಳ್ಳು ಕರಪತ್ರ ಹಂಚಿದ್ದಾರೆ ಎಂದು ದೂರಿದರು.
ಕೃಷಿ, ಪಶು ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ ಭೂಮಿ ಸ್ವಾಧೀನ ಮಾಡಿಕೊಳ್ಳಲಾಯಿತು. ಅಲ್ಲಿ ನನ್ನ ಮಕ್ಕಳು ಓದುತ್ತಿಲ್ಲ. ತೀರಾ ಬಡತನದ ಕುಟುಂಬದಿಂದ ಬಂದ ಮಕ್ಕಳು ಓದುತ್ತಿದ್ದಾರೆ. ಭೂ ವಶಪಡಿಸಿಕೊಂಡು ನಿರ್ಮಾಣ ಮಾಡಿದ ಬಡಾವಣೆಯಲ್ಲಿ ನಾನಾಗಲಿ, ನನ್ನ ಕುಟುಂಬದ ಸದಸ್ಯರು ಅಥವಾ ಸಂಬಂಧಿಕರು ನಿವೇಶನ ಪಡೆದಿಲ್ಲ. ಬಡವರ ಪರ ಕೆಲಸ ಮಾಡುವುದನ್ನು ಸಹಿಸದ ಕೆಲ ಪಟ್ಟಭದ್ರ ಶಕ್ತಿಗಳು ಕೊಳಕು ರಾಜಕಾರಣ ಮಾಡುತ್ತಿವೆ. ಅದಕ್ಕೆ ಮಹಾಜನತೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ವಾರದಲ್ಲಿ ಪಟ್ಟಿ ಬಿಡುಗಡೆ: ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯ ಬಗ್ಗೆ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು, ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಸಿಂದ್ಯಾ ಹಾಗೂ ಇತರೆ ನಾಯಕರು ತೀರ್ಮಾನಿಸಿ ಪಟ್ಟಿ ಸಿದ್ಧ ಪಡಿಸಿದ್ದು, ಇನ್ನೊಂದು ವಾರದೊಳಗೆ ಪಟ್ಟಿ ಬಿಡುಗಡೆ ಮಾಡಲಿದ್ದಾರೆ. ಟಿಕೆಟ್ ವಿಚಾರದಲ್ಲಿ ದೇವೇಗೌಡರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಅದೇ ಅಂತಿಮ ಎಂದು ರೇವಣ್ಣ ಸ್ಪಷ್ಟ ಪಡಿಸಿದರು.
ಬಸ್ ನಿಲ್ದಾಣ ಬಳಕೆ: ನಗರದ ಹೃದಯ ಭಾಗದಲ್ಲಿರುವ ಹಳೇ ಬಸ್ ನಿಲ್ದಾಣದ ಜಾಗವನ್ನು ಹೆಚ್ಚಾಗಿ ಬಸ್ ನಿಲ್ದಾಣಕ್ಕೆ ಬಳಕೆಯಾಗಬೇಕು. ಇಲ್ಲವಾದಲ್ಲಿ ಜಾಗವನ್ನು ನಗರಸಭೆ ವ್ಯಾಪ್ತಿಗೆ ವಾಪಸ್ ಪಡೆಯಲಾಗುತ್ತದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಯಾವುದೇ ಕಾರಣಕ್ಕೂ ಈ ಜಾಗವನ್ನು ವಾಣಿಜ್ಯ ಉದ್ದೇಶಕ್ಕಾಗಿ ಹೆಚ್ಚಾಗಿ ಬಳಸಿಕೊಳ್ಳಬಾರದು ಎಂದು ನುಡಿದರು. ಶಾಸಕ ಎಚ್.ಎಸ್.ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಇದ್ದರು.