ಮೋಟಮ್ಮ ಟಿಕೆಟ್ ಕೇಳಿಲ್ಲ: ಸಣ್ಣಸ್ವಾಮಿ
ಹಾಸನ: ಸಕಲೇಶಪುರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವೆ ಮೋಟಮ್ಮ ಟಿಕೆಟ್ ಕೇಳಿಲ್ಲ ಎಂದು ಕಾಂಗ್ರೆಸ್ ಮುಖಂಡ ಡಿ.ಸಿ. ಸಣ್ಣಸ್ವಾಮಿ ಹೇಳಿದ್ದಾರೆ. ಪಕ್ಷದ ಕೆಲ ಮುಖಂಡರು ಈ ಕ್ಷೇತ್ರದಿಂದ ನಾಯಕಿ ಮೋಟಮ್ಮ ಅವರಿಗೆ ನೀಡುವಂತೆ ಒತ್ತಾಯಿಸಿದ್ದಾರೆ. ರಾಜ್ಯ ನಾಯಕಿ ಮೋಟಮ್ಮಗೆ ಟಿಕೆಟ್ ನೀಡಿದರೆ ಯಾವುದೇ ವಿರೋಧವಿಲ್ಲ. ಅದರೆ ಮೋಟಮ್ಮ ಎಲ್ಲಿಯೂ ಸಕಲೇಶಪುರ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಕೇಳಿಲ್ಲ. ಅಂದ ಮೇಲೆ ಅವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸುತ್ತಿರುವುದು ಸರಿಯಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಈ ಕ್ಷೇತ್ರದಿಂದ ತಾವು ಸೇರಿದಂತೆ ಡಿ.ಮಲ್ಲೇಶ್, ಮುನಿಸ್ವಾಮಿ ಅವರ ಹೆಸರನ್ನು ಕೆಪಿಸಿಸಿಗೆ ಕಳುಹಿಸಿದ್ದು, ಪಕ್ಷ ಸಂಘಟನೆಗೆ ಶ್ರಮಿಸಿರುವ ತಮಗೆ ಟಿಕೆಟ್ ನೀಡಬೇಕು ಎಂದು ಹೇಳಿದರು.