10 ವರ್ಷದ ಪೋರನಿಂದ ಪದಕಗಳ ಬೇಟೆ..
ಹಾಸನ: ಹತ್ತು ವರ್ಷದ ಪೋರನೊಬ್ಬ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿ ನಾನಾ ಪದಕಗಳನ್ನು ಮುಡಿಗೇರಿಸಿ ಕೊಂಡಿದ್ದಾನೆ.
ನಗರದ ವಲ್ಲಬಾಯಿ ರಸ್ತೆಯ ಆಟೋ ಚಾಲಕ ಮೋಹನ್ ಹಾಗೂ ಕಲಾವತಿ ಪುತ್ರ ಎಚ್.ಎಂ.ಸೂರಜ್. ಹತ್ತು ವರ್ಷದ ಈ ಪೋರಾ ಚಿಕ್ಕ ವಯಸ್ಸಿನಲ್ಲೇ ಕರಾಟೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಈಗ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಕ್ಕೆ ಸಿದ್ದತೆ ನಡೆಸಿದ್ದಾನೆ. ಸೂರಜ್ಶ್ರೀರಂಗ ಶಾಲೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಳೆದ 4 ವರ್ಷಗಳಿಂದ ಕರಾಟೆ ಕಲಿಯಲು ಆರಂಭಿಸಿದ್ದ. ಪ್ರಾರಂಭದಲ್ಲಿ ಕರಾಟೆ ಕಷ್ಟವಾದರೂ ಬರು ಬರುತ್ತಾ ಕರಾಟೆಯನ್ನು ನೀರು ಕುಡಿದಷ್ಟು ಸುಲಭವಾಗಿಸಿಕೊಂಡು, ಅನೇಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಪದಕಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದ್ದಾನೆ. 2009ರಲ್ಲಿ ರಾಜ್ಯ ಮಟ್ಟದ ಕರಾಟೆ ಪಂದ್ಯದಲ್ಲಿ ಪ್ರಥಮ ಸ್ಥಾನ, 2010ರಲ್ಲಿ ರಾಜ್ಯ ಕರಾಟೆ ಪಂದ್ಯದಲ್ಲಿ ಪ್ರಥಮ ಹಾಗೂ 2011ರಲ್ಲಿಯೂ ರಾಜ್ಯ ಕರಾಟೆ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಸತತವಾಗಿ ಮೂರು ಬಾರಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಅಷ್ಟೇ ಅಲ್ಲದೆ 2012ರಲ್ಲಿ ಮೈಸೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು ಪದಕ ಮುಡಿಗೇರಿಸಿ ಕೊಂಡಿದ್ದಾನೆ. ಜೂನ್ 9 ರಂದು ಶ್ರೀಲಂಕಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಕ್ಕೆ 120 ಮಕ್ಕಳಲ್ಲಿ 14 ಮಕ್ಕಳನ್ನು ಆಯ್ಕೆ ಮಾಡಿದ್ದು, ಈ ಪೈಕಿ ಸೂರಜ್ ವಿದೇಶ ಪಂದ್ಯಾವಳಿಗೆ ಆಯ್ಕೆಯಾಗಿದ್ದಾನೆ. ದೇಶ ಹಾಗೂ ರಾಜ್ಯದ ಕೀರ್ತಿಯನ್ನು ಉತ್ತುಂಗಕ್ಕೇರಿಸಲು ಶ್ರೀಲಂಕಾಗೆ ಹೊರಟಿರುವ ಸೂರಜ್ ಸಾಧನೆಗೈದು ಕೀರ್ತಿ ತರಲಿ ಎಂಬುದು ಎಲ್ಲರ ಆಶಯ.