ಇನ್ಸ್ಪೆಕ್ಟರ್, ಪಿಸಿ ಅಮಾನತು
ಹಾಸನ: ಪೊಲೀಸ್ ವಾಹನಗಳ ದುರಸ್ತಿ ಕಾರ್ಯದಲ್ಲಿ ಹಣ ದುರುಪಯೋಗ ಆರೋಪದ ಮೇಲೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್) ಮೋಟಾರು ವಿಭಾಗದ ಇನ್ಸ್ಪೆಕ್ಟರ್ ಮತ್ತು ಅವರ ಕಚೇರಿಯಲ್ಲಿ ರೈಟರ್ ಆಗಿರುವ ಇಬ್ಬರು ಕಾನ್ಸ್ಟೇಬಲ್ಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ವರ್ಷದ ಹಿಂದಷ್ಟೆ ಇನ್ಸ್ಪೆಕ್ಟರ್ ಆಗಿ ಇಲ್ಲಿಗೆ ಬಂದ ತಿಮ್ಮಪ್ಪಗೌಡ ಮತ್ತು ಬರಹಗಾರರಾದ ರಾಘವೇಂದ್ರ ಮತ್ತು ಇಲಿಯಾಜ್ ಅವರನ್ನು ಏಪ್ರಿಲ್ 3 ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇವೆಯಿಂದ ಅಮಾನತು ಮಾಡಿ, ಸೂಕ್ತ ತನಿಖೆಗಾಗಿ ಆದೇಶಿಸಿದ್ದಾರೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಪ್ರಧಾನ ಕಚೇರಿಯಲ್ಲಿರುವ ಕುಂದುಕೊರತೆ ಘಟಕಕ್ಕೆ ಫೆ.4, 2013 ರಂದು ಬಂದ ಅನಾಮಧೇಯ ಪತ್ರದಲ್ಲಿ ಇನ್ಸ್ಪೆಕ್ಟರ್ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಮಕ್ಕಳಿಗೆ ವಿಷ:ತಾಯಿ ಆತ್ಮಹತ್ಯೆ
ಕೊಪ್ಪಳ: ಮನೆಯಲ್ಲಿ ನಡೆದ ಜಗಳದಿಂದ ಬೇಸತ್ತ ತಾಯಿ ತನ್ನಿಬ್ಬರು ಮಕ್ಕಳಿಗೆ ವಿಷ ಉಣಿಸಿ, ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಾಲೂಕಿನ ಕುಟಗನಹಳ್ಳಿಯಲ್ಲಿ ನಡೆದ ಈ ಘಟನೆಯಿಂದ ತಾಯಿ ಸುನೀತಾ (40) ಹಾಗೂ ಮಗ ವರುಣ (8), ಇನ್ನೋರ್ವ ಮಗ ಆನಂದ(6) ಮೃತಪಟ್ಟಿರುವ ತಾಲೂಕಿನ ಕುಟಗನಹಳ್ಳಿಯಲ್ಲಿ ನಡೆದಿದೆ. ತಂದೆ ಬೈದಿದ್ದರಿಂದ ಮನನೊಂದು ಸುನೀತಾ ಮಕ್ಕಳನ್ನು ಕರೆದುಕೊಂಡು ತೋಟದ ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಒಂದೇ ದಿನ 6 ಮಂದಿ ಸಾವು
ಮಂಗಳೂರು: ನಗರದಲ್ಲಿ ಟ್ಯಾಂಕರ್ ಮತ್ತು ಖಾಸಗಿ ಬಸ್ಗಳು ಹಂತಕರಾಗಿ ಪರಿವರ್ತನೆಯಾಗಿವೆ. ನಗರದಿಂದ 30 ಕಿ.ಮೀ. ವ್ಯಾಪ್ತಿಯಲ್ಲಿ ಗುರುವಾರ ಒಂದೇ ದಿನ ಮೂರು ಅಪಘಾತಗಳಲ್ಲಿ 6 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ನಗರ ಹೊರವಲಯದ ಎಕ್ಕೂರಿನಲ್ಲಿ ಗುರುವಾರ ಬಸ್ ಡಿಕ್ಕಿ ಹೊಡೆದು ಬೈಕ್ನಲ್ಲಿ ತೆರಳುತ್ತಿದ್ದ ಇಬ್ಬರು ಸಹೋದರರು ಮೃತಪಟ್ಟಿದ್ದಾರೆ. ತೊಕ್ಕೊಟ್ಟು ನಿವಾಸಿ ಉಮ್ಮರ್ ರಶೀದ್ (22) ಮತ್ತು ಮಹಮ್ಮದ್ ನೌಶಾದ್ (25) ಮೃತಪಟ್ಟವರು. ನೌಶಾದ್ ಬಂದರ್ನಲ್ಲಿ ಕಾರ್ಮಿಕರಾಗಿದ್ದರೆ, ರಶೀದ್ ಮೆಡಿಕಲ್ನಲ್ಲಿ ಉದ್ಯೋಗಿಯಾಗಿದ್ದರು. ಮಾಜಿ ಯೋಧ ಬಲಿ: ಇನ್ನೊಂದು ಅಪಘಾತದಲ್ಲಿ, ಉಳ್ಳಾಲ ಸೇತುವೆ ಬಳಿ ಟ್ಯಾಂಕರ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ತೊಕ್ಕೊಟ್ಟು ಕೆರೆ ಬೈಲು ಕಲ್ಲಾಪು ನಿವಾಸಿ, ಮಾಜಿ ಯೋಧ ಕರ್ನೇಲಿಯೋ ಡಿಸೋಜ (55) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಗರ್ಭಿಣಿ ಸಹಿತ ಮೂವರ ಸಾವು: ಮಂಗಳೂರು ಗಡಿ ಪ್ರದೇಶದ ಕೇರಳದ ಕುಂಬ್ಳೆಯಲ್ಲಿ ಗುರುವಾರ ಬೆಳಗ್ಗೆ 9.30ಕ್ಕೆ ಹೆರಿಗೆಗೆಂದು ರಿಕ್ಷಾದಲ್ಲಿ ತೆರಳುತ್ತಿದ್ದ ಗರ್ಭಿಣಿ ಸಹಿತ ಮೂವರು ಬಸ್ ಡಿಕ್ಕಿ ಹೊಡೆದು ದಾರುಣವಾಗಿ ಮೃತಪಟ್ಟಿದ್ದಾರೆ. ಪೈವಳಿಕೆ ಕಾಯರಕಟ್ಟೆಯ ಬಬಿತಾ (25), ತಾಯಿ ಜಾನಕಿ (48), ಪತಿ ರಾಮ (35) ಮೃತಪಟ್ಟವರು. ರಿಕ್ಷಾ ಚಾಲಕ ಹ್ಯಾರಿಸ್ (27) ಚಿಂತಾಜನಕ ಸ್ಥಿತಿಯಲ್ಲಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.