ತಾಲೂಕಲ್ಲಿ ವರುಣನ ಆರ್ಭಟ
ಕನ್ನಡಪ್ರಭ ವಾರ್ತೆ ಹಾಸನ ಏ. 4
ತಾಲೂಕಿನಾದ್ಯಂತ ಬುಧವಾರ ರಾತ್ರಿ ಭಾರಿ ಗಾಳಿ, ಗುಡುಗು, ಮಿಂಚು ಸಮೇತ ಸುರಿದ ಧಾರಾಕಾರ ಮಳೆಯಿಂದಾಗಿ ಮರಗಳು ಧರೆಗೆ ಉರುಳಿ, ವಿದ್ಯುತ್ ಕಂಬಗಳು ಮುರಿದು ಬಿದ್ದು, ಲಕ್ಷಾಂತರ ರು.ನಷ್ಟ ಉಂಟಾಗಿದೆ.
ಭೀಕರ ಬರಗಾಲದಿಂದ ಮಳೆ, ಬೆಳೆ ಇಲ್ಲದೆ ಮೊದಲೇ ತತ್ತರಿಸಿ ಹೋಗಿದ್ದ ರೈತರಿಗೆ ಕಳೆದ ಎರಡು ದಿನಗಳಿಂದ ಸುರಿದ ಭಾರಿ ಗಾಳಿ, ಮಳೆಯಿಂದಾಗಿ ನಗರ ಹೊರವಲಯದಲ್ಲಿ ಗಿಡ ಮರಗಳು ಉರುಳಿ ವಿದ್ಯುತ್ ಕಂಬಗಳು ನೆಲಕ್ಕೆ ಅಪ್ಪಳಿಸಿ ಲಕ್ಷಾಂತರ ರು.ನಷ್ಟ ಸಂಭವಿದೆ.
ಹೊರವಲಯದ ಹರಳಹಳ್ಳಿ ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ಅಪಾರ ನಷ್ಟ ಸಂಭವಿಸಿದೆ. ಹೆಚ್ಚು ಕಾಲ ದಿಢೀರನೆ ದಪ್ಪ ಹನಿಯೊಂದಿಗೆ ಬಿದ್ದ ಭಾರಿ ಮಳೆಯಿಂದಾಗಿ ಹರಳಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಕೆಲ ಗ್ರಾಮಗಳಲ್ಲಿ ಅನೇಕ ಮನೆಗಳು, ದನದ ಕೊಟ್ಟಿಗೆ ಸೇರಿದಂತೆ ಅಷ್ಟೋ ಇಷ್ಟೋ ನೀರನ್ನು ಹಾಕಿ ಬೆಳೆಸಿದ್ದ ತೆಂಗಿನ ಮರಗಳು ಧರೆಗೆ ಉರುಳಿ ಬಿದ್ದಿವೆ. ಅಷ್ಟೇ ಅಲ್ಲದೆ ನಗರದ ಕೆಲವು ಭಾಗಗಳಲ್ಲಿ ಮಳೆ ನೀರು ಮನೆಯೊಳಗೆ ನುಗ್ಗಿದ್ದಲ್ಲದೆ ಜೋರು ಗಾಳಿ ಮತ್ತು ಮಳೆಯ ಆರ್ಭಟಕ್ಕೆ ಮರಗಳು ಧರಗೆ ಉರುಳಿ ಲಕ್ಷಾಂತರ ರು.ಮೌಲ್ಯದ ಆಸ್ತಿ ಪಾಸ್ತಿ ನಷ್ಟ ಉಂಟಾಗಿದೆ. ಬಿಸಿಲ ಬೇಗೆ ಹೆಚ್ಚಾಗಿ ಇದ್ದಕ್ಕಿದ್ದಂತೆ ಸುರಿದ ಮಳೆ ಮತ್ತು ಗಾಳಿಗೆ ಗ್ರಾಮೀಣ ಪ್ರದೇಶದ ಜನರು ತತ್ತರಿಸಿ ಹೋಗಿದ್ದಾರೆ. ಭಾರೀ ಗಾತ್ರದ ಆಲಿಕಲ್ಲುಗಳೊಂದಿಗೆ ಎಡಬಿಡದೆ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಬುಧವಾರ ರಾತ್ರಿ ಸುಮಾರು 7 ಗಂಟೆಗೆ ಪ್ರಾರಂಭವಾದ ಮಳೆ ಗುಡುಗು-ಮಿಂಚು ಸಹಿತವಾಗಿ ಧಾರಕಾರವಾಗಿ ಸುರಿಯಿತು. ತಾಲೂಕಿನಾದ್ಯಂತ ಒಂದು ತಾಸಿಗೂ ಹೆಚ್ಚು ಕಾಲ ದಿಢೀರನೆ ಆಲಿಕಲ್ಲಿನೊಂದಿಗೆ ಬಿದ್ದ ಭಾರಿ ಮಳೆಯಿಂದಾಗಿ ಇಲ್ಲಿನ ನಾನಾ ಬಡಾವಣೆಗಳಲ್ಲಿ ಮನೆಗಳೊಳಗೆ ಚರಂಡಿ ನೀರು ನುಗ್ಗಿದೆ.
ಇದ್ದಕ್ಕಿದ್ದಂತೆಯೇ ಭಾರಿ ಗುಡುಗು-ಮಿಂಚು ಸಹಿತವಾಗಿ ಸುರಿಯಲಾರಂಭಿಸಿದ ಮಳೆಯಿಂದಾಗಿ, ನಗರದ ಕೆಲವು ರಸ್ತೆಗಳಲ್ಲಿ ಅವೈಜ್ಞಾನಿಕಲವಾಗಿ ನಿರ್ಮಿಸಿರುವ ಒಳಚರಂಡಿ ಹಾಗೂ ಮ್ಯಾನ್ಹೋಲ್ಗಳಲ್ಲಿ ನೀರು ಉಕ್ಕಿ ರಸ್ತೆಯಲ್ಲಿಯೇ ಹರಿಯಲಾರಂಭಿಸಿ ಕೊಳಚೆ ನೀರೆಲ್ಲ ರಸ್ತೆಯಲ್ಲಿ ಹರಿದು ದುರ್ವಾಸನೆಬೀರುತ್ತಿತ್ತು.
ಅಷ್ಟೇ ಅಲ್ಲದೆ ಕೊಳಚೆ ನೀರು ಅಕ್ಕಪಕ್ಕದ ಮನೆಗಳು, ನೆಲಮಾಳಿಗೆ ನುಗ್ಗಿ ಹಾನಿ ಸಂಭವಿಸಿದೆಯಲ್ಲದೇ, ಇದೇ ಬೀದಿಯಲ್ಲಿ ಮಳೆ ಹಾಗೂ ಗಾಳಿಯ ರಭಸಕ್ಕೆ ತೆಂಗಿನ ಮರವು ಮನೆಯ ಮೇಲೆ ಉರಳಿ ಬಿದ್ದು ಮೇಲ್ಚಾವಣಿ ಮುರಿದು ಬಿದ್ದಿದೆ.
ನಗರದ ಹಳೇ ಶಾಂತಿ ಸ್ಟೋರ್ ವೃತ್ತದ ಸಮೀಪ ರಸ್ತೆಯಲ್ಲಿ ಮಳೆಯ ನೀರು ನಿಂತು ಕೆರೆಯ ವಾತಾವರಣ ನಿರ್ಮಾಣವಾಗಿತ್ತು. ವಾಹನಗಳು ಸಂಚರಿಸಲು ಚಾಲಕರು ಹರಸಾಹಸ ಪಡುವಂತಾಯಿತು. ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ರಸ್ತೆ ತುಂಬಾ ನೀರು ನಿಂತಿತ್ತು. ಒಳ ಚರಂಡಿ ಸರಿಯಾಗಿ ಇರದ ಕಾರಣ ನೀರು ರಸ್ತೆಯಲ್ಲಿ ನಿಂತು ಕೆರೆಯಂತೆ ಕಾಣುತ್ತಿತ್ತು.
ಕೆಲವು ಕಡೆಗಳಲ್ಲಿ ಒಳಚರಂಡಿ ಅವ್ಯವಸ್ತೆಯಿಂದಾಗಿ ಇಲ್ಲೂ ಕೂಡ ಮಳೆಯ ನೀರು ಚರಂಡಿದಿಂದ ಹೊರ ಹರಿಯುತ್ತಿದ್ದರಿಂದ ಸ್ಥಳೀಯರು ನಗರಸಭೆಯ ಕಳಪೆ ಕಾಮಗಾರಿ ಕುರಿತು ಹಿಡಿಶಾಪ ಹಾಕುತ್ತಿದ್ದುದು ಕಂಡು ಬಂತು. ನಗರಸಭೆಯವರು ಈಗಲಾದರೂ ಸರಿಯಾಗಿ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು. ರಸ್ತೆಗಳ ಕಾಮಗಾರಿ ಸರಿಯಾಗಿ ನಿರ್ವಹಿಸಬೇಕು ಎಂದು ಆಗ್ರಹಿಸಿದರು.
ಹರಳಹಳ್ಳಿಯಲ್ಲಿ ಸುಮಾರು 9 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಸಂಪೂರ್ಣವಾಗಿ ಮುರಿದು ಬಿದ್ದಿವೆ. ಗ್ರಾಮದಲ್ಲಿ ಹಳೆಯದಾದ ವಿದ್ಯುತ್ ಕಂಬಗಳಿಂದಾಗಿ ಉರುಳಿ ಬಿದ್ದ ಮರದ ರಭಸಕ್ಕೆ ಕಂಬ ಹಾಗೂ ವಿದ್ಯುತ್
ತಂತಿಗಳು ಮುರಿದು ಬಿದ್ದಿವೆ. ಗ್ರಾಮದ ಬೀದಿಯಲ್ಲಿ ತೆಂಗಿನ ಮರ ಸೇರಿದಂತೆ ನಾನಾ ರೀತಿಯ ಮರಗಳು ಮನೆಯ ಮೇಲೆ ಉರುಳಿ ಬಿದ್ದಿವೆ.
ಕಡು ಬಡವರು ವಾಸಿಸುವ ಹಲವಾರು ಮನೆಗಳ ಮೇಲ್ಛಾವಣಿ ಕುಸಿದು ಬಿದ್ದಿವೆ. ಮನೆಯ ಹೆಂಚುಗಳು ಹಾರಿ ಹೋಗಿವೆ. ತಾಲೂಕಿನಾದ್ಯಂತ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.