ಮೋಟಮ್ಮಗೆ ಟಿಕೆಟ್ಗೆ ಒತ್ತಾಯ
ಕನ್ನಡಪ್ರಭ ವಾರ್ತೆ ಆಲೂರು ಏ.4
ಹೈಕಮಾಂಡ್ ಯಾವುದೇ ರೀತಿಯ ಒತ್ತಡಕ್ಕೆ ಮಣಿಯದೆ ಈ ಬಾರಿ ಮೋಟಮ್ಮನವರಿಗೆ ಟಿಕೆಟ್ ನೀಡಬೇಕೆಂದು ತಾಲೂಕು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಸಾಕ್ ಅಹಮದ್ ಆಗ್ರಹಿಸಿದರು.
ಅವರು ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ತಾಲೂಕಿನ ಪ್ರಮುಖ ಸಮಸ್ಯೆಗಳಾದ ಕಾಡಾನೆ ಹಾವಳಿ, ಬರ, ಕುಡಿಯುವ ನೀರು ಇತ್ಯಾದಿ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶವಿದ್ದು, ಪಕ್ಷದ ಅಭ್ಯರ್ಥಿ ಗೆದ್ದಲ್ಲಿ ಕ್ಷೇತ್ರದ ಅಭಿವೃಧ್ಧಿಗೆ ಅನುಕೂಲವಾಗುತ್ತದೆ. ಕ್ಷೇತ್ರಕ್ಕೆ ಮೋಟಮ್ಮನವರೇ ಸೂಕ್ತ ಅಭ್ಯರ್ಥಿಯಾಗಿದ್ದು, ನಮ್ಮ ಶಕ್ತಿಮೀರಿ ಕೆಲಸ ಮಾಡಿ ಅವರನ್ನು ಗೆಲ್ಲಿಸುತ್ತೇವೆ ಎಂದ ಅವರು, ಆಕಾಂಕ್ಷಿಗಳೆಲ್ಲರೂ ಮೋಟಮ್ಮ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ತಾಲೂಕು ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಚ್.ಧರ್ಮಪ್ಪ ಮಾತನಾಡಿ, ಡಿ.ಮಲ್ಲೇಶ್ಗೆ ಟಿಕೆಟ್ ನೀಡುವ ಬಗ್ಗೆ ನಮ್ಮ ವಿರೋಧವಿದ್ದು ಒಂದು ವೇಳೆ ಅವರಿಗೆ ಟಿಕೆಟ್ ನೀಡಿದಲ್ಲಿ ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಕಾರ್ಯಕತರು ಸಾಮೂಹಿಕವಾಗಿ ರಾಜೀನಾಮೆ ನೀಡುವುದಾಗಿ ತಿಳಿಸಿದ ಅವರು ಒಂದು ವೇಳೆ ಮೋಟಮ್ಮರಿಗೆ ಟಿಕೆಟ್ ತಪ್ಪಿದಲ್ಲಿ ಡಿ.ಸಿ.ಸಣ್ಣಸ್ವಾಮಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದರು.