ನೀತಿ ಸಂಹಿತೆ: ಯುಗಾದಿ ಸಂಭ್ರಮಕ್ಕೆ ಸಂಚಕಾರ- ನಗರಸಭೆ ಮಾಜಿ ಅಧ್ಯಕ್ಷರ ವಿಷಾದ
ಹಾಸನ: 25 ವರ್ಷಗಳಿಂದಲೂ ನಿರಂತರವಾಗಿ ಯುಗಾದಿ ಹಬ್ಬದಂದು ತಮ್ಮ ಮನೆಯ ಮುಂದೆ ಬೃಹತ್ ಶಾಮಿಯಾನ ಹಾಕಿ ಸಮಾಜದ ಹಿಂದುಳಿದ ವರ್ಗ, ಬಡಜನತೆಗೆ, ಹಿಂದು, ಮುಸ್ಲಿಂ, ಕ್ರೈಸ್ತ ಬಾಂಧವರಿಗೆ ಉಚಿತವಾಗಿ ಊಟದ ವ್ಯವಸ್ಥೆ ಮಾಡುತ್ತಿದ್ದೆ. ಆದರೆ ಈ ಬಾರಿ ಚುನಾವಣಾ ನೀತಿ ಸಂಹಿತೆಯಿಂದಾಗಿ ಯುಗಾದಿ ಸಂಭ್ರಮಕ್ಕೆ ಸಂಚಕಾರ ಬಂದಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಚನ್ನವೀರಪ್ಪ ತಿಳಿಸಿದ್ದಾರೆ.
ಪ್ರತಿ ವರ್ಷವೂ 500ಕ್ಕೂ ಹೆಚ್ಚು ಬಡಜನರನ್ನು ಗುರುತಿಸಿ ಉಚಿತವಾಗಿ ತಿರುಪತಿ, ತಿರುಮಲ ಹಾಗೂ ಕಾಳಹಸ್ತಿ ಯಾತ್ರೆಯನ್ನು ನಡೆಸುತ್ತಾ ಬರಲಾಗಿದೆ. ಆದರೆ ನೀತಿ ಸಂಹಿತೆ ಇರುವುದರಿಂದ ನಮ್ಮ ಕುಟುಂಬಕ್ಕೆ ಎಲ್ಲ ಸಾಮಾಜಿಕ, ಧಾರ್ಮಿಕ ಕಾರ್ಯಗಳಿಗೆ ಕಡಿವಾಣ ಬಿದ್ದಂತಾಗಿದೆ. ಇದರಿಂದ ಯುಗಾದಿಯಂದು ಇವನ್ನು ಆಚರಿಸುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಈ ಕಾರ್ಯ ಮಾಡಲಾಗುವುದು ಎಂದಿದ್ದಾರೆ.
ಯುಗಾದಿ ಹಬ್ಬದಂದು ಪ್ರತಿ ವರ್ಷವೂ ತಮ್ಮ ಹಿರಿಯರ ಕಾರ್ಯ ನಡೆಸಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಯುಗಾದಿ ದಿನದಂದು ತಪ್ಪಿದಂತಾಗಿದೆ ಎಂದು ವಿಷಾದಿಸಿದ್ದಾರೆ.