ಮಾಸ್ತಿ ಕನ್ನಡ ಸಾರಸ್ವತ ಲೋಕದ ಸಣ್ಣಕಥೆಗಳ ಜನಕ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಏ.5
ತಮ್ಮ ಕಥೆಗಳ ಮೂಲಕ ಜೀವನದ ಮೌಲ್ಯ, ತತ್ವ ಹಾಗೂ ನೈಜತೆಯನ್ನು ಸಾಹಿತ್ಯಿಕವಾಗಿ ರಚಿಸಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕನ್ನಡ ಸಾರಸ್ವತ ಲೋಕದ ಸಣ್ಣ ಕಥೆಗಳ ಜನಕರಾಗಿದ್ದರು ಎಂದು ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೇಶವ್ ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ತಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹಿಂದಲಹಳ್ಳಿ ಮಂಜುನಾಥ್ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕುರಿತಾದ ನಾಲ್ಕನೇ ಮನೆ-ಮನೆ ಸಾಹಿತ್ಯ ಗೋಷ್ಠಿಯಲ್ಲಿ ಕನ್ನಡ ಸಾರಸ್ವತ ಲೋಕದ ಆಸ್ತಿ ಎಂದೇ ಖ್ಯಾತರಾಗಿದ್ದ ಮಾಸ್ತಿ ವೆಂಕಟೇಶ
ಅಯ್ಯಂಗಾರ್ ಅವರ ಬದುಕು ಮತ್ತು ಸಾಹಿತ್ಯ ಕುರಿತು ಮಾತನಾಡಿದರು.
ಕನ್ನಡ, ತಮಿಳು ಹಾಗೂ ಇಂಗ್ಲಿಷ್ ಭಾಷೆಯ ಮೇಲೆ ಅಪಾರ ಪಾಂಡಿತ್ಯ ಸಾಧಿಸಿದ್ದ ಮಾಸ್ತಿ ಅವರಿಗೆ ಶೈಕ್ಷಣಿಕ ಜೀವನದ ಸಂದರ್ಭದಿಂದಲೂ ಇಂಗ್ಲಿಷ್ ನಾಟಕಕಾರ ಷೇಕ್ಸ್ಪಿಯರ್ ಸಾಹಿತ್ಯ ಹೆಚ್ಚಿನ ಪ್ರಭಾವವನ್ನು ಬೀರಿತ್ತು ಎಂದ ಹೇಳಿದರು.
ಮಾಸ್ತಿ ಸಾಹಿತ್ಯ ಕ್ಷೇತ್ರವನ್ನು ಮೈಗೂಡಿಸಿಕೊಳ್ಳದೇ ಇರುತ್ತಿದ್ದರೆ, ಕನ್ನಡ ಸಾಹಿತ್ಯ ಕ್ಷೇತ್ರ ಒಬ್ಬ ಅಪ್ರತಿಮ ಹಾಗೂ ಪ್ರತಿಭಾವಂತ ಸಾಹಿತಿಯನ್ನು ಕಳೆದುಕೊಳ್ಳುತ್ತಿತ್ತು ಎಂದೂ ತಿಳಿಸಿದರು.
ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕೃತಿಗಳ ಸಮಗ್ರ ಅಧ್ಯಯನವು ಸಾಹಿತ್ಯಾಸಕ್ತರಾದ ನಮಗೆ ಎಷ್ಟೇ ಅಧ್ಯಯನ ಕೈಗೊಂಡರೂ ಅದು ಕೇವಲ ಸಾಗರದಲ್ಲಿನ ಒಂದು ಬೊಗಸೆ ನೀರನ್ನು ಹಿಡಿದಂತೆ ಎಂದ ಅವರು, ಮಾಸ್ತಿ ಸಾಹಿತ್ಯ ಮತ್ತು ತಮ್ಮ ಬದುಕು ಎರಡಕ್ಕೂ ಸ್ವಾಮ್ಯತೆಗಳನ್ನು ಮೈಗೂಡಿಸಿ ಕೊಂಡವರಾಗಿದ್ದರು. ಮಾಸ್ತಿಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಅನೇಕ ಸಾಹಿತಿಗಳಿಗೆ ನೆರವು ನೀಡಿದ್ದಲ್ಲದೇ, ಅವರನ್ನೂ ಸಾಹಿತ್ಯ ಲೋಕದ ಮುಖ್ಯವಾಹಿನಿಗೆ ತರುವಲ್ಲಿ ಹೆಚ್ಚಿನ ಪ್ರೋತ್ಸಾಹ ತುಂಬಿದರು ಎಂದು ಹೇಳಿದರು.
ಗೋಷ್ಠಿಯನ್ನು ಉದ್ಘಾಟಿಸಿದ ನಿವೃತ್ತ ಪ್ರಾಂಶುಪಾಲ ಡಾ.ಕೆ.ಸಿ.ಮರಿಯಪ್ಪ ಮನೆ-ಮನೆ ಸಾಹಿತ್ಯ ಗೋಷ್ಠಿಗಳ ಮೂಲಕ ಕನ್ನಡದ ಸಾಹಿತ್ಯ ಪರಂಪರೆಯನ್ನು ಮನ-ಮನಗಳಿಗೆ ತಲುಪಿಸುವಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ಸೇವೆ ಕೈಗೊಂಡಿದೆ ಎಂದು ಕಸಾಪ ಬಗ್ಗೆ ಮೆಚ್ಚುಗೆ ಹೇಳಿದರು.
ಕವಿ-ಕಾವ್ಯ ಹಾಗೂ ಸಾಹಿತ್ಯ ಪರಂಪರೆಗಳ ಅಧ್ಯಯನವನ್ನು ವಿದ್ಯಾರ್ಥಿಗಳು ಕೇವಲ ಪರೀಕ್ಷೆಯ ದೃಷ್ಟಿ ಹಾಗೂ ಅಂಕಗಳಿಕೆಗಾಗಿ ಮಾತ್ರವೇ ಅಭ್ಯಸಿಸದೇ, ಸಾಹಿತ್ಯದ ಅಧ್ಯಯನವು ಬದುಕಿನ ಸಾಹಿತ್ಯಿಕ ನೆಲೆಯಾಗಿ ಅಭ್ಯಸಿಸಿದಾಗ ಮಾತ್ರವೇ ಸಾಹಿತ್ಯದ ಉಳಿವು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ ಮಾತನಾಡಿ, ಸರ್ಕಾರದ ಉನ್ನತ ಹುದ್ದೆಗಳಲ್ಲಿದ್ದರೂ ಮಾಸ್ತಿಯವರಲ್ಲಿ ಅಡಗಿದ್ದ ಸಾಹಿತ್ಯದ ಕುರಿತಾದ ಅದಮ್ಯ ಆಸಕ್ತಿ ಅಪ್ರತಿಮವಾದುದು ಎಂದು ತಿಳಿಸಿದರು. ತಾಲೂಕು ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಂ.ಸಿ.ಕುಮಾರಸ್ವಾಮಿ, ಕಾರ್ಯದರ್ಶಿ ಕೆ.ಶಿವಕುಮಾರಾಚಾರಿ. ತಾಲೂಕು ಕಸಾಪ ಉಪಾಧ್ಯಕ್ಷ ಎಂ.ಎನ್.ಜೈಪ್ರಕಾಶ್, ತಾಲೂಕು ಜಾನಪದ ಪರಿಷತ್ತಿನ ಕಾರ್ಯದರ್ಶಿ ಎಚ್.ಎನ್.ಕೃಷ್ಣ, ಪರಿಷತ್ತಿನ ಪದಾಧಿಕಾರಿ ಎಸ್.ಎನ್.ಖಾದ್ರಿ ಆರೋಗ್ಯ ನಿರೀಕ್ಷಕ ಆರ್.ಬಿ.ಪುಟ್ಟೇಗೌಡ ಇದ್ದರು. ಶಿಕ್ಷಕ ಜವರೇಗೌಡ ಸ್ವಾಗತಿಸಿದರು. ಉಪನ್ಯಾಸಕ ಧರ್ಮರಾಜ್ ವಂದಿಸಿದರು, ಶಿಕ್ಷಕಿ ಕಮಲ ನಿರೂಪಿಸಿದರು.