ಮುಖ್ಯ ರಸ್ತೆಯಲ್ಲೇ ವ್ಯಾಪಾರ: ಸಂಚಾರಕ್ಕೆ ಅಡಚಣೆ
ಕ.ಪ್ರ. ವಾರ್ತೆ ರಾಮನಾಥಪುರ ಏ. 5
ಕೊಣನೂರು ಗ್ರಾಮದಲ್ಲಿ ಪ್ರತಿ ಗುರುವಾರ ನಡೆಯುವ ವಾರದ ಸಂತೆಯಲ್ಲಿ ವ್ಯಾಪಾರಸ್ಥರು ಕುಶಾಲನಗರ ಮುಖ್ಯ ರಸ್ತೆ ಬದಿಯಲ್ಲಿಯೇ ಸರಕುಗಳನ್ನು ಇಟ್ಟು ವ್ಯಾಪಾರ ನಡೆಸುತ್ತಿರುವ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಇಲ್ಲಿ ಸುಮಾರು 50 ವರ್ಷಗಳ ಹಿಂದೆ ಪ್ರಾರಂಭವಾದ ಸಂತೆ ಬೆಳವಣಿಗೆ ಕಾಣಲು ಹಿಂದಿನ ಗ್ರೂಪ್ ಪಂಚಾಯಿತಿ ಹಾಗೂ ಗ್ರಾಪಂ ಅಧ್ಯಕ್ಷರು ತೆಗೆದುಕೊಂಡ ಕ್ರಮಗಳ ಬಗ್ಗೆ ಇಲ್ಲಿಯ ಜನ ಇಂದಿಗೂ ನೆನಪಿಸಿ ಕೊಳ್ಳುತ್ತಾರೆ.
ಅವರು ಪಟ್ಟ ಶ್ರಮದ ಫಲವಾಗಿ ಸಂತೆ ಇಂದು ಸಾಕಷ್ಟು ಖ್ಯಾತಿಗಳಿಸಿ ರೈತರು ಹಾಗೂ ವ್ಯಾಪಾರಿಗಳನ್ನು ತನ್ನತ್ತ ಸೆಳೆಯ ತೊಡಗಿತು. ಇದೀಗ ಸಂತೆಯಲ್ಲಿ ವ್ಯಾಪಾರಕ್ಕಾಗಿ ಸುತ್ತ ಮುತ್ತಲಿನ ಹಳ್ಳಿಗಳಲ್ಲದೇ ದೂರದ ಹೆಬ್ಬಾಲೆ, ಕೊರೆನೂರು, ಹಲಗನಹಳ್ಳಿ, ಕಣಗಾಲು, ಶಿರಂಗಾಲ, ರಾಮನಾಥಪುರ ಮುಂತಾದ ಭಾಗದಿಂದ ಅಪಾರ ಸಂಖ್ಯೆಯ ವ್ಯಾಪಾರಸ್ಥರು ಬರುತ್ತಿದ್ದು, ಜಾನುವಾರುಗಳು ಹಾಗೂ ಆಡು ಕುರಿಗಳ ವಹಿವಾಟಿಗೂ ಹೆಚ್ಚು ಪ್ರಸಿದ್ದಿ ಪಡೆದಿದೆ.
ಮೈದಾನದ ಒಳಗೆ ಸಂತೆ ನಡೆಸಲು ಸ್ಥಳಾವಕಾಶವಿದ್ದರೂ ಮುಖ್ಯ ರಸ್ತೆಯಲ್ಲಿ ಓಡಾಡುವ ವಾಹನಗಳ ಸಂಚಾರಕ್ಕೂ ಅಡಚಣೆ ಆಗಿದೆ. ಇದನ್ನು ನಿಯಂತ್ರಿಸದ ಪೊಲೀಸರ ನಿರ್ಲಕ್ಷ್ಯದಿಂದಾಗಿ ಇಲ್ಲಿ ಪ್ರತಿವಾರ ಟ್ರಾಫಿಕ್ ಜಾಮ್ ಉಂಟಾಗಿ ಪಾದಚಾರಿಗಳಿಗೂ ತೊಂದರೆಯಾಗಿದೆ ಎಂಬುದು ಸಾರ್ವಜನಿಕರ ಆರೋಪ.
ಪ್ರತಿ ವರ್ಷ ಸಂತೆ ಹರಾಜು ಸುಂಕದಿಂದ ಲಕ್ಷಾಂತರ ರುಪಾಯಿ ಆದಾಯ ಬರುತ್ತದೆ. ಇದರಿಂದ ಅಗತ್ಯ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ಹೆಚ್ಚುವರಿ ಶೆಡ್ಗಳು, ಶೌಚಾಲಯ ಮುಂತಾದ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಮೂಲಕ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಿ ಕೊಡುವಂತೆ ವ್ಯಾಪಾಸ್ಥರು ಒತ್ತಾಯಿಸಿದ್ದಾರೆ.
ಇಂದು ಗೀತೆ ಗಾಯನ ಸ್ಪರ್ಧೆ
ಹೊಳೆನರಸೀಪುರ: ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಘಟಕದಿಂದ ಏ.6 ರಂದು ಪಟ್ಟಣದ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಜಾನಪದ ಗೀತೆ ಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಬಾ.ರಾ.ಸುಬ್ಬರಾಯ ತಿಳಿಸಿದ್ದಾರೆ. ಹಿರಿಯ ಪತ್ರಕರ್ತ ಎಚ್.ವಿ.ಸುರೇಶ್ಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು ು. ಮುಖ್ಯ ಅತಿಥಿಗಳಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಬಿ.ಇರ್ಷಾದ್ ಭಾಗವಹಿಸುವರು.