4ನೇ ಬಾರಿಯೂ ಆನಂದ್ಗೆ ಟಿಕೆಟ್ ಮಿಸ್!
ದಯಾಶಂಕರ ಮೈಲಿ
ಹಾಸನ: ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಈಗ ಅಧಿಕೃತವಾಗಿ 6 ಕ್ಷೇತ್ರಗಳ ಅಭ್ಯರ್ಥಿ ಹೆಸರು ಪ್ರಕಟಿಸಿದ್ದರೂ, ಶ್ರವಣಬೆಳಗೊಳ ಕ್ಷೇತ್ರದಿಂದ ಇತ್ತೀಚೆಗಷ್ಟೇ ಜೆಡಿಎಸ್ನಿಂದ ಪಕ್ಷಾಂತರಗೊಂಡು ಕಾಂಗ್ರೆಸ್ಗೆ ಬಂದ ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡರಿಗೂ ಟಿಕೆಟ್ ನೀಡಲಾಗಿದೆ.
ಘೋಷಣೆ ಮಾಡಿದರೇ ಬಂಡಾಯ, ಭಿನ್ನಾಭಿಪ್ರಾಯ ಹೆಚ್ಚಾಗಬಹುದು ಎಂಬ ಕಾರಣಕ್ಕೆ ಪುಟ್ಟೇಗೌಡರ ಹೆಸರನ್ನು ಪ್ರಕಟಿಸಿಲ್ಲ. ಒಂದೆರಡು ದಿನಗಳಲ್ಲಿ ಗೌಡರ ಹೆಸರನ್ನು ಪ್ರಕಟಿಸಲಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ಅಧಿಕೃತ ಮೂಲಗಳು ತಿಳಿಸಿವೆ.
ಇದನ್ನು ಅರಿತ ಶ್ರವಣಬೆಳಗೊಳ ಕ್ಷೇತ್ರದ ಮೂಲ ಕಾಂಗ್ರೆಸ್ಸಿಗರಾದ ಸಿ.ವಿ. ರಾಜಪ್ಪ, ಚಂದ್ರೇಗೌಡ, ಗೋಪಾಲಸ್ವಾಮಿ ಮತ್ತು ಕಬ್ಬಳ್ಳಿ ರಂಗೇಗೌಡ ಮತ್ತಿತರರು ಶನಿವಾರ ದೆಹಲಿಗೆ ತೆರಳಿ, ಪುಟ್ಟೇಗೌಡರಿಗೆ ಟಿಕೆಟ್ ತಪ್ಪಿಸಿ ಗೋಪಾಲಸ್ವಾಮಿ ಅವರಿಗೆ ಟಿಕೆಟ್ ಕೊಡಿಸಲು ಅಂತಿಮ ಕಸರತ್ತು ನಡೆಸುತ್ತಿದ್ದಾರೆ.
ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಪಡೆದಿರುವ ಕೆಪಿಸಿಸಿ ಸದಸ್ಯ ಎಚ್.ಕೆ. ಮಹೇಶ್ ಬಿಟ್ಟರೇ ಉಳಿದವರೆಲ್ಲರೂ ಹಳೇ ಮುಖಗಳೇ. ಈಗಾಗಲೇ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಗೆಲುವಿನ ರುಚಿ ಅನುಭವಿಸಿರುವ ಮಾಜಿ ಸಚಿವ ಬಿ. ಶಿವರಾಂ ಅರಸೀಕೆರೆಯಿಂದ ಸ್ಫರ್ಧಿಸುತ್ತಿದ್ದರೆ, ಹಾಲಿ ಶಾಸಕ ಎ.ಮಂಜು ಎಂದಿನಂತೆ ಅರಕಲಗೂಡು ಕ್ಷೇತ್ರದಿಂದ, ಮತ್ತೊಬ್ಬ ಶಾಸಕ ವೈ.ಎನ್. ರುದ್ರೇಶ್ಗೌಡರು ಮತ್ತೆ ಬೇಲೂರು ಕ್ಷೇತ್ರದಿಂದ, ಎಸ್.ಜಿ. ಅನುಪಮಾ ಮತ್ತೊಮ್ಮೆ ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಪಡೆದಿದ್ದಾರೆ. 2008 ರ ಚುನಾವಣೆಯಲ್ಲಿ ಅನುಪಮ ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.
ಸಕಲೇಶಪುರ ಮೀಸಲು ಕ್ಷೇತ್ರದಿಂದ ಮಾಜಿ ಶಾಸಕ ಡಿ. ಮಲ್ಲೇಶ್ಗೆ ಟಿಕೆಟ್ ನೀಡಲಾಗಿದೆ. ಮಲ್ಲೇಶ್ 1999 ರ ಚುನಾವಣೆಯಲ್ಲಿ ಬೇಲೂರು ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋತಿದ್ದರು.
ಟಿಕೆಟ್ ವಂಚಿತ ಆನಂದ್: ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಂ. ಆನಂದ್ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಮಾಡಿದ ನಾಲ್ಕನೇ ಪ್ರಯತ್ನದಲ್ಲೂ ಟಿಕೆಟ್ ಪಡೆಯುವಲ್ಲಿ ವಂಚಿತರಾಗಿದ್ದಾರೆ. ಹಿರಿತನ, ಸಜ್ಜನಿಕೆಯ ಗುಣಗಳಿದ್ದರೂ ಪಕ್ಷದ ಹೈಕಮಾಂಡ್ ಟಿಕೆಟ್ ನೀಡಿಲ್ಲ ಎಂಬ ಅಸಮಾಧಾನ ಕಾಂಗ್ರೆಸ್ ವಲಯದಲ್ಲಿ ಉಂಟಾಗಿದೆ.
ಆದರೂ ಆನಂದ್ ಅವರು, ಪಕ್ಷ ಮುಖ್ಯ, ಪಕ್ಷ ಮಹೇಶ್ಗೆ ಟಿಕೆಟ್ ನೀಡಿದೆ. ಅವರ ಪರ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ಹೇಳಿದ್ದರೂ, ಅವರ ಅನುಯಾಯಿಗಳಲ್ಲಿ ತೀವ್ರ ಅಸಮಾಧಾನವಂತೂ ಇದೆ.
ಆನಂದ್ಗೆ ಯಾವ್ಯಾಗ ಟಿಕೆಟ್ ತಪ್ಪಿತು: 1989 ರಲ್ಲಿ ಟಿಕೆಟ್ ಘೋಷಣೆ ಆಗಿ ನಾಲ್ಕು ದಿನಗಳು ಪ್ರಚಾರ ಮಾಡಿದ್ದ ಆನಂದ್ ಅವರಿಗೆ ಕೊನೆ ಗಳಿಗೆಯಲ್ಲಿ ಟಿಕೆಟ್ ತಪ್ಪಿ ನಾಮಪತ್ರ ಹಿಂತೆಗೆದುಕೊಂಡಿದ್ದರು. 1994 ರಲ್ಲಿ ಅಂದಿನ ಸಿಎಂ ವೀರಪ್ಪಮೂಯ್ಲಿ ಅವರೇ ಅಭ್ಯರ್ಥಿಯೆಂದು ಘೋಷಣೆ ಮಾಡಿದ್ದರಿಂದ ಆನಂದ್ ನಾಮಪತ್ರ ಸಲ್ಲಿಸಿದ್ದರು. ನಂತರ ವರಿಷ್ಠರ ಸೂಚನೆ ಮೇರೆಗೆ ನಾಮಪತ್ರ ಹಿಂತೆಗೆದು ಕೊಂಡರು. 1999 ರಲ್ಲಿ ಲೋಕಸಭೆ ಮತ್ತು ವಿಧಾನಸಭೆ ಎರಡಕ್ಕೂ ನಾಮಪತ್ರ ಸಲ್ಲಿಸಿದ್ದರು. ಕೊನೆಗೆ ಎರಡೂ ಟಿಕೆಟ್ಗಳು ತಪ್ಪಿದವು. ಈ ಬಾರಿ ಟಿಕೆಟ್ ಪಡೆಯಲೇ ಬೇಕೆಂದು ದೆಹಲಿಯಲ್ಲಿ ಹತ್ತಾರು ದಿನ ಮೊಕ್ಕಾಂ ಹೂಡಿದ್ದರು. ಆದರೆ, ಈಗಲೂ ಆನಂದ್ಗೆ ಟಿಕೆಟ್ ಸಿಗಲಿಲ್ಲ. ಬದಲಿಗೆ ಎಚ್.ಕೆ. ಮಹೇಶ್ಗೆ ಸಿಕ್ಕಿದೆ.
ಶಿವರಾಂ ಕ್ಷೇತ್ರ ಬದಲಾವಣೆ: ಕ್ಷೇತ್ರ ಪುನರ್ ವಿಂಗಡಣೆ ನಂತರ ಗಂಡಸಿ ಕ್ಷೇತ್ರ ಹೋದ ನಂತರ 2008 ರಲ್ಲಿ ಮಾಜಿ ಸಚಿವ ಬಿ. ಶಿವರಾಂ ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನ್ನಪ್ಪಿದ್ದರು. ನಂತರದ ದಿನಗಳಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಶಿವರಾಂ ಅರಸೀಕೆರೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಶಿವರಾಂ ಕೆಜೆಪಿ ಅಭ್ಯರ್ಥಿ ಡಾ. ಲೋಕೇಶ್ ಅವರನ್ನಲ್ಲದೆ, ಜೆಡಿಎಸ್ನ ಪ್ರಬಲ ಅಭ್ಯರ್ಥಿ ಹಾಲಿ ಶಾಸಕ ಕೆ.ಎಂ. ಶಿವಲಿಂಗೇಗೌಡರನ್ನು ಎದುರಿಸಬೇಕಾಗಿದೆ.
ಒತ್ತಡಕ್ಕೆ ಮಣಿಯದ ಕಾಂಗ್ರೆಸ್: ಸಕಲೇಶಪುರ ಕ್ಷೇತ್ರದಿಂದ ಸ್ಪರ್ಧಿಸಲು ಸ್ಥಳೀಯರಿಗೇ ಟಿಕೆಟ್ ಸಿಗಬೇಕೆಂದು ಆ ಕ್ಷೇತ್ರದ ಹಲವು ಸಂಘಟನೆಗಳು ಒತ್ತಾಯ ಮಾಡಿದ್ದವು. ಅದಕ್ಕೆ ಕಾಂಗ್ರೆಸ್ ಮನ್ನಣೆ ನೀಡಿಲ್ಲ. ಬದಲಿಗೆ ಬೇಲೂರು ಕ್ಷೇತ್ರದ ಮಾಜಿ ಶಾಸಕ ಡಿ. ಮಲ್ಲೇಶ್ ಅವರಿಗೆ ಟಿಕೆಟ್ ನೀಡಿದೆ.
ಅಡ್ಡ ಮತದಾನ ಎಫೆಕ್ಟ್ ಆಗಿಲ್ಲ: ಬೇಲೂರು ವಿಧಾನಸಭೆಯಿಂದ ಸ್ಪರ್ಧಿಸಲು ಮತ್ತೆ ಕಾಂಗ್ರೆಸ್ನಿಂದ ಟಿಕೆಟ್ ಪಡೆದಿರುವ ಶಾಸಕ ವೈ.ಎನ್. ರುದ್ರೇಶ್ಗೌಡರು, ವಿಧಾನಪರಿಷತ್ ಚುನಾವಣೆ ಮತದಾನದ ವೇಳೆ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಸಂಡರಗಿ ಪರ ಮತದಾನ ಮಾಡದೇ ಅಡ್ಡ ಮತದಾನ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗೌಡರ ಬದಲು ವೀರಶೈವ ಸಮುದಾಯದ ಚಂದ್ರಕಲಾ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.
ಜೆಡಿಎಸ್ನಲ್ಲಿ ನಿಗೂಢ, ನಿಗೂಢ: ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ಆಗಿದ್ದರೂ ಬೇಲೂರು ಮತ್ತು ಹಾಸನ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಮಾತ್ರ ನಿಗೂಢವಾಗಿದೆ. ಅರಕಲಗೂಡಿನಲ್ಲಿ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ಶ್ರವಣಬೆಳಗೊಳದಿಂದ ಜಿಪಂ ಮಾಜಿ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ, ಅರಸೀಕೆರೆಯಿಂದ ಕೆ.ಎಂ. ಶಿವಲಿಂಗೇಗೌಡ, ಹೊಳೆನರಸೀಪುರದಿಂದ ಎಚ್.ಡಿ.ರೇವಣ್ಣ ಮತ್ತು ಸಕಲೇಶಪುರ ಮೀಸಲು ಕ್ಷೇತ್ರದಿಂದ ಹಾಲಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದಾರೆ.
ಆದರೆ ಬೇಲೂರಿನಿಂದ ರಾಜ್ಯಸಭೆ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ ಕಣಕ್ಕೆ ಇಳಿಯುತ್ತಾರೆ ಎಂದು ಹೇಳಲಾಗಿತ್ತಾದರೂ ಅಂತಿಮ ಕ್ಷಣದಲ್ಲಿ ರೇವಣ್ಣ ಬದಲಾವಣೆ ಮಾಡಿದರೂ ಮಾಡಬಹುದು ಎಂದು ಹೇಳಲಾಗುತ್ತಿದೆ.ಅದೇ ರೀತಿ ಹಾಸನ ಕ್ಷೇತ್ರದಿಂದ ಶಾಸಕ ಎಚ್.ಎಸ್. ಪ್ರಕಾಶ್ಗೆ ಟಿಕೆಟ್ ಸಿಗುವುದು ಖಚಿತ ಎಂದು ಹೇಳಲಾಗಿದೆ. ರೇವಣ್ಣ ಯಾಕೆ ಘೋಷಣೆ ಮಾಡಿಲ್ಲ ಎಂಬುದು ನಿಗೂಢವಾಗಿದೆ.