'ಅಂಗವಿಕಲರಿಗೆ ಆತ್ಮಸ್ಥೈರ್ಯ ತುಂಬಬೇಕು'
ಕನ್ನಡಪ್ರಭ ವಾರ್ತೆ ಹಾಸನ ಏ.6
ಅಂಗವಿಕಲರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕೆಂದು ರಾಜ್ಯ ಸರ್ಕಾರಿ ಅಂಗವಿಕಲ ನೌಕರ ಸಂಘದ ರಾಜ್ಯಾಧ್ಯಕ್ಷ ಎಸ್. ರೇಣುಕಾರಾಧ್ಯ ಹೇಳಿದರು. ನಗರದ ಕಲಾಭವನ ಹಿಂದಿನ ಉತ್ತರ ಬಡಾವಣೆ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಿಲ್ಲಾ ಸರ್ಕಾರಿ ಅಂಗವಿಕಲ ನೌಕರರ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಗವಿಕಲರಲ್ಲಿ ಆತ್ಮಸ್ಥೈರ್ಯದ ಕೊರತೆ ಇದೆ. ಅಂಗವಿಕಲ ಸರ್ಕಾರಿ ನೌಕರರು ಸೌಲಭ್ಯ ಪಡೆಯಬೇಕಾದರೆ ಅವರು ಸಂಘಟಿತರಾಗಬೇಕು. ಈ ರೀತಿ ಸಂಘಟನೆಯಿಂದಲೇ ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ಸರ್ಕಾರಿ ಅಂಗವಿಕಲ ನೌಕರರಿಗೆ ಮೂಲ ವೇತನದ ಶೇಕಡಾ ಆರರಷ್ಟು ವಾಹನ ಭತ್ಯೆಯನ್ನು ಮಾರ್ಚ್ ತಿಂಗಳ ವೇತನದಲ್ಲಿ ಜಮಾ ಆಗುತ್ತಿದ್ದು, ನೌಕರರು ಯಾವುದೇ ರೀತಿಯಲ್ಲಿ ಗೊಂದಲಕ್ಕೆ ಈಡಾಗಬಾರದೆಂದು ಹೇಳಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ, ಎಸ್ಸಿ ಹಾಗೂ ಎಸ್ಟಿ ನೌಕರರಿಗೆ ಅನುಸರಿಸುವ ಜೇಷ್ಠತೆಯ ನಿಯಮವನ್ನು ಸರ್ಕಾರಿ ಅಂಗವಿಕಲ ನೌಕರರಿಗೂ ಅನ್ವಯಿಸಿ ಬಡ್ತಿಯಲ್ಲಿ ಮೀಸಲಾತಿ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದರು.
ಜೊತೆಗೆ ಅಂಗವಿಕಲ ನೌಕರರಿಗೆ ನೀಡಬೇಕಾಗಿರುವ ಸೌಲಭ್ಯಗಳನ್ನು ನೀಡದೇ ಅಲೆದಾಡಿಸುವ ಪ್ರಸಂಗಗಳು ಕಂಡು ಬಂದಿದ್ದು, ಅಂತಹ ಅಧಿಕಾರಿಗಳ ವಿರುದ್ಧ ಸಂಘ ಹೋರಾಟ ನಡೆಸುತ್ತದೆ ಎಂದು ಹೇಳಿದರು.
ರಾಜ್ಯ ಸಂಚಾಲಕ ಭರಮಪ್ಪ ಕಟ್ಟಿಮನಿ ಮಾತನಾಡಿದರು. ಅಂಗವಿಕಲ ನೌಕರರ ಸೌಲಭ್ಯಗಳಿಗಾಗಿ ಹೋರಾಟ ಮಾಡಿದ ರಾಜ್ಯಾಧ್ಯಕ್ಷ ಎಸ್. ರೇಣುಕಾರಾಧ್ಯ, ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ, ರಾಜ್ಯ ಸಂಚಾಲಕ ಭರಮಪ್ಪ ಕಟ್ಟಿಮನಿ, ಕೋಲಾರ ಜಿಲ್ಲಾಧ್ಯಕ್ಷ ಎಚ್.ವಿ. ವೆಂಕಟರಮಣಪ್ಪ ಅವರನ್ನು ಜಿಲ್ಲಾ ಘಟಕ ವತಿಯಿಂದ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಂಘದ ಜಿಲ್ಲಾ ಕಾರ್ಯದರ್ಶಿ ನಾಗರಾಜ್ ನಿರೂಪಿಸಿದರು. ಜಿಲ್ಲಾಧ್ಯಕ್ಷ ಎಚ್.ಜೆ. ರಾಮಕೃಷ್ಣ ಸ್ವಾಗತಿಸಿದರು. ಜಿಲ್ಲಾ ಖಜಾಂಚಿ ಅಂಥೋನಿ ಎಸ್. ವಂದಿಸಿದರು.