ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆರೋಗ್ಯ ನಿರ್ವಹಣೆಗೆ ಒತ್ತು ನೀಡಿದರೆ ರೋಗ ಮುಕ್ತ

Rashmi Kasaragodu
Updated On : 6 Apr 2013, 11:15 am

ಕ.ಪ್ರ.ವಾರ್ತೆ  ಮೈಸೂರು  ಏ.6
ನಾವು ರೋಗ ನಿರ್ವಹಣೆ ಮಾಡುವ ಬದಲು, ಆರೋಗ್ಯ ನಿರ್ವಹಣೆಗೆ ಒತ್ತು ನೀಡಿದರೆ ಜೀವನವಿಡೀ ರೋಗಗಳಿಂದ ಮುಕ್ತರಾಗಿರಬಹುದು ಎಂದು ಆಯುಷ್ ಇಲಾಖೆ ನಿರ್ದೇಶಕ ಶ್ರೀಕಂಠಯ್ಯ ಹೇಳಿದರು.
ಆರೋಗ್ಯ ಭಾರತಿ ಮತ್ತು ಆಯುಷ್ ಇಲಾಖೆ ಸಂಯುಕ್ತವಾಗಿ ಶನಿವಾರ ನಗರದ ಜಗನ್ಮೋಹನ ಅರಮನೆಯಲ್ಲಿ ಏರ್ಪಡಿಸಿದ್ದ ಆರೋಗ್ಯಪೂರ್ಣ ಜೀವನಶೈಲಿ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ ಆಯುರ್ವೇದ ಔಷಧ ಸಸ್ಯಗಳು ಯಥೇಚ್ಛವಾಗಿ ಸಿಗುತ್ತಿದ್ದು, ಇದನ್ನು ಸರಿಯಾಗಿ ಬಳಸಿಕೊಳ್ಳುವ ಕಲೆ ಬೆಳೆಸಿಕೊಳ್ಳಬೇಕು ಎಂದರು.
ಸೈಡ್ ಎಫೆಕ್ಟ್ ಇಲ್ಲ: ಆಯುರ್ವೇದ ಔಷಧಿಯ ಗುಣವುಳ್ಳ ಸಸ್ಯಗಳು, ತರಕಾರಿ, ಪದಾರ್ಥಗಳಿಂದ ಮನೆಯಲ್ಲಿಯೇ ಮದ್ದು ತಯಾರಿಸುವ ಪದ್ಧತಿ ನಮ್ಮಲ್ಲಿ ಹಿಂದಿನಿಂದಲೂ ಅನುಸರಿಸಿಕೊಂಡು ಬರಲಾಗಿದೆ. ಇದಕ್ಕೆ ಒತ್ತು ನೀಡಿ ಪ್ರಚುರಪಡಿಸಬೇಕು. ಅಲೋಪತಿ ಔಷಧಿ ಬಳಸುವುದರಿಂದ ಸೈಡ್ ಎಫೆಕ್ಟ್ ಇರುತ್ತದೆ. ಇದು ಮತ್ತೊಂದು ರೋಗಕ್ಕೂ ಕಾರಣವಾಗಬಹುದು. ಆದರೆ, ಆಯುರ್ವೇದದಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ ಇರುವುದಿಲ್ಲ ಎಂದರು.
ಯೋಗವೇ ಮದ್ದು: ಯೋಗದಿಂದ ರೋಗ ನಿವಾರಣೆ ಮಾಡಬಹುದು. ಪ್ರತಿದಿನ ಯೋಗ ಅಭ್ಯಾಸ ಮಾಡಿದರೆ ಮಾನಸಿಕ ನೆಮ್ಮದಿ ಸಿಗುತ್ತದೆ. ದೈಹಿಕವಾಗಿಯೂ ಕ್ಷಮತೆ ಕಾಪಾಡಿಕೊಳ್ಳಬಹುದು.
 ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ ಪಡೆಯಲು ಯೋಗ, ಆಧ್ಯಾತ್ಮ ಪ್ರಮುಖ ಮಾರ್ಗಗಳು. ಇವುಗಳ ಸಮತೋಲನದಿಂದ ಸಾಮಾಜದ ಸ್ವಾಸ್ಥ್ಯ ಚೆನ್ನಾಗಿರುತ್ತದೆ. ಆಯುಷ್ ಇಲಾಖೆಯಿಂದ ಶಿಕ್ಷಕರಿಗೆ ಯೋಗ ತರಬೇತಿ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಶಾಲೆಯಲ್ಲಿಯೂ ಯೋಗ ಗುರು ಇರುತ್ತಾರೆ. ಅವರು ಮಕ್ಕಳಿಗೆ ಯೋಗ ಕಲಿಸಿ ಗೈರು ಹಾಜರಿ, ಆಗಾಗ ಹುಷಾರು ತಪ್ಪುವುದನ್ನು ತಪ್ಪಿಸಿ ಏಕಾಗ್ರತೆ ರೂಢಿಸಿಕೊಳ್ಳಲು ಸಹಾಯ ಮಾಡುತ್ತಾರೆ ಎಂದು ತಿಳಿಸಿದರು.
ರೋಗ ಹತೋಟಿ: ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಮಾತನಾಡಿ, ಆಯುರ್ವೇದದಲ್ಲಿನ ಸತ್ವಯುತ ಔಷಧಿ ಗುಣದಿಂದ ಉತ್ತೇಜಿತರಾಗಿರುವ ವಿದೇಶಿಗರು ಭಾರತದ ಕಡೆ ತಿರುಗಿ ನೋಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.  ಮಹೇಶಾತ್ಮನಾಂದಜಿ ಸಾನ್ನಿಧ್ಯ ವಹಿಸಿದ್ದರು. ಆರೋಗ್ಯ ಭಾರತಿ ರಾಷ್ಟ್ರೀಯ ಅಧ್ಯಕ್ಷ ಡಾ. ರಾಘವೇಂದ್ರ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement