ಕಾಲೇಜಿನಲ್ಲಿ ರೆಡ್ಕ್ರಾಸ್ ಘಟಕ ಉದ್ಘಾಟನೆ
ಕ.ಪ್ರ. ವಾರ್ತೆ ಗೊರೂರು ಏ.6
ಇಲ್ಲಿನ ಎ.ಎನ್. ವರದರಾಜುಲು ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ರೆಡ್ಕ್ರಾಸ್ ಘಟಕದ ಉದ್ಘಾಟನೆ ನಡೆಯಿತು. ಕಾಲೇಜಿನ ರೆಡ್ಕ್ರಾಸ್ ಘಟಕ ಅಧಿಕಾರಿ ಎಚ್.ವೆಂಕಟೇಶ್ ಅವರು ಪ್ರಪಂಚದಲ್ಲಿ ಮತ್ತು ಭಾರತದಲ್ಲಿ ರೆಡ್ಕ್ರಾಸ್ ಸಂಸ್ಥೆ ಬೆಳೆದು ಬಂದ ದಾರಿಯನ್ನು ತಿಳಿಸುತ್ತಾ, ರೆಡ್ಕ್ರಾಸ್ನ್ನು 1863 ರಲ್ಲಿ ಸ್ವಿಡ್ಜರ್ಲ್ಯಾಂಡ್ ದೇಶದ ಹೆನ್ರಿ ಡ್ಯೂನಾಂಟ್ ಪ್ರಪ್ರಥಮ ಬಾರಿಗೆ ಸ್ಥಾಪಿಸಿದರು. ಭಾರತದಲ್ಲಿ 1920 ರಲ್ಲಿ ಹಾಗೂ ಕರ್ನಾಟಕದಲ್ಲಿ 1921 ರಲ್ಲಿ ಪ್ರಾರಂಭವಾಯಿತು. ಸಂತ್ರಸ್ತರಿಗೆ ನೆರವು ನೀಡುವುದೇ ರೆಡ್ಕ್ರಾಸ್ ಸಂಸ್ಥೆಯ ಮುಖ್ಯ ಉದ್ದೇಶವೆಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷ ಹೆಮ್ಮಿಗೆ ಮೋಹನ್ ಮಾತನಾಡಿ, ಘಟಕ ಕೇವಲ ಉದ್ಘಾಟನೆಯಾದರೆ ಸಾಲದು ಅದರ ಪ್ರಾಮಾಣಿಕ ಪ್ರಯೋಜನ ಆಗಬೇಕು. ಸ್ವಯಂಸೇವಕರು ತರಬೇತಿ ಪಡೆದು ರೆಡ್ಕ್ರಾಸ್ನಿಂದ ನೊಂದವರಿಗೆ ಸೇವೆ ಸಲ್ಲಿಸಬೇಕು ಎಂದರು. ಮುಖ್ಯ ಅತಿಥಿ ಸ್ವಾತಂತ್ರ್ಯ ಹೋರಾಟಗಾರ ಹೋಂಗಾರ್ಡ್ ಶಿವಣ್ಣ ಅವರು, ಯುವಕರು, ಸಮಾಜದ ಒಳಿತಿಗೆ ಭಕ್ತಿ, ಅರ್ಪಣೆ ಮುಂತಾದ ಉತ್ತಮ ಅಂಶಗಳನ್ನು ರೂಢಿಸಿ ಕೊಳ್ಳಬೇಕೆಂದು ಹೇಳಿದರು.
ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ಅವರು, ಜೂನಿಯರ್ ರೆಡ್ಕ್ರಾಸ್ ಬಗ್ಗೆ ತಿಳಿಸಿದರು. ಜಿಲ್ಲಾ ಘಟಕದ ಪೇಯ್ಡ್ ಸೆಕ್ರೆಟರಿ ರಾಮೇಗೌಡ ವಿದ್ಯಾರ್ಥಿಗಳಿಗೆ ರೆಡ್ಕ್ರಾಸ್ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಯೋಗಾನರಸಿಂಹಸ್ವಾವು ವಿದ್ಯಾಸಂಸ್ಥೆ ಕಾರ್ಯದರ್ಶಿ ಎ.ಜಿ. ರಾಮನಾಥ್, ರೆಡ್ಕ್ರಾಸ್ ಘಟಕ ಕೇವಲ ಸಭೆ ಸಮಾರಂಭಗಳಿಗೆ ಮೀಸಲಾಗಬಾರದೆಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಆರ್. ಚಂದ್ರಶೇಖರ್ ಮಾತನಾಡಿ, ಕಾಲೇಜಿನಲ್ಲಿ ರೆಡ್ಕ್ರಾಸ್ ಘಟಕದಿಂದ ಹಲವಾರು ಸೇವೆಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು. ಎ.ಬಿ. ದಿವ್ಯ ಸ್ವಾಗತಿಸಿದರು.