ಕುಸಿದ ಅಂತರ್ಜಲ: ತೆಂಗಿಗೆ ಕುತ್ತು
ಕನ್ನಡಪ್ರಭ ವಾರ್ತೆ ಹಾರನಹಳ್ಳಿ ಏ.6
ಕಲ್ಪತರು ನಾಡೆಂದೇ ಪ್ರಸಿದ್ಧಿ ಪಡೆದಿರುವ ಅರಸೀಕೆರೆ ತಾಲೂಕಿನ ರೈತರಿಗೆ ತೆಂಗು ಜೀವನಾಧಾರ. ಕಳೆದ ದಶಕಗಳಿಂದ ತೆಂಗಿನ ಮರಗಳಿಗೆ ನುಸಿ ರೋಗ ಹಾಗೂ ಬೆಂಕಿರೋಗ ಯಾವಾಗ ಪ್ರಾರಂಭವಾಯಿತೋ ರೈತಾಪಿ ವರ್ಗದವರು ಕಂಗಾಲಾಗಿ ಜೀವನ ನಡೆಸುವುದೇ ಕಷ್ಟಕರವಾಗಿದೆ.
ಕಳೆದ ಸಾಲಿನಲ್ಲಿ ತಾಲೂಕಿನಲ್ಲಿ ಮಳೆಯ ಅಭಾವದಿಂದ ತಾಲೂಕಿನ ಕೆರೆ ಕಟ್ಟೆಗಳು ನೀರಿಲ್ಲದೆ ಬತ್ತಿವೆ. ಲಕ್ಷಾಂತರ ರು. ಸಾಲ ಮಾಡಿ 500-600 ಅಡಿ ಆಳಕ್ಕೆ ಕೊರೆದರೂ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿಲ್ಲ.
ಅಂತರ್ಜಲವಂತೂ ಸಂಪೂರ್ಣವಾಗಿ ಕುಸಿದಿದೆ. ಇದರಿಂದ ತೋಟಗಳಲ್ಲಿ ತೆಂಗಿನ ಮರಗಳ ಸುಳಿಗಳು ಬಿದ್ದು ಹೋಗುತ್ತಿವೆ ಹಾಗೂ ಇನ್ನು ಕೆಲವು ತೆಂಗಿನ ಮರಗಳಲ್ಲಿ ಸೋಗೆಗಳು ಜೋತು ಬಿದ್ದಿರುವುದು ಸರ್ವೇ ಸಾಮಾನ್ಯವಾಗಿದೆ.
ಉತ್ತಮ ಫಲ ನೀಡುತ್ತಿದ್ದ ತೆಂಗಿನ ಮರಗಳು ವಾರ್ಷಿಕ 10 ತೆಂಗಿನಕಾಯಿ ಬಿಡುವುದೇ ಕಷ್ಟಕರವಾಗಿದೆ. ಇಂತಹ ಸಂಕಷ್ಟ ಸ್ಥಿತಿಯಲ್ಲಿರುವ ರೈತರಿಗೆ ಸರ್ಕಾರದಿಂದ ಯಾವುದೇ ಪರಿಹಾರ ಬಿಡುಗಡೆಯಾಗಿಲ್ಲವೆಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ 2 ವರ್ಷಗಳಿಂದ ಅರಸೀಕೆರೆ ಭಾಗದಲ್ಲಿ ಮಳೆ ಆಗಿಲ್ಲ. ಇದರಿಂದ ತೆಂಗಿನ ಮರಗಳು ಒಣಗಿ ನಿಲ್ಲುತ್ತಿವೆ. ಸರ್ಕಾರ ಕೇವಲ ಸಾವಿರ ರು. ಪರಿಹಾರ ನೀಡಿ ಕೈ ತೊಳೆದುಕೊಂಡಿದೆ. ತೋಟಗಾರಿಕಾ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ. ಚುನಾವಣಾ ಸಂದರ್ಭದಲ್ಲಿ ತಾಲೂಕಿನ ಕೆರೆಗಳಿಗೆ ನದಿ ಮುಖಾಂತರ ನೀರು ಹರಿಸುವುದಾಗಿ ರಾಜಕಾರಣಿಗಳು ಬರಿ ಆಶ್ವಾಸನೆ ನೀಡುತ್ತಾ ಬಂದಿದ್ದಾರೆಯೇ ಹೊರತು ಪ್ರಾಮಾಣಿಕವಾಗಿ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ರೈತ ಮುಖಂಡ ರೇವಣ್ಣ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ತಾಲೂಕಿನಲ್ಲಿ ತೆಂಗಿನ ಮರಗಳು ಸುಳಿ ಬಿದ್ದು ಒಣಗಿ ನಿಂತಿವೆ. ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮರಗಳ ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ತಲಾ 5 ಸಾವಿರ ರು. ಪರಿಹಾರ ನೀಡಬೇಕು ಹಾಗೂ ಮಳೆ ಬಿದ್ದ ಸಂದರ್ಭದಲ್ಲಿ ತೆಂಗಿನ ಸಸಿಗಳನ್ನು ರೈತರಿಗೆ ಉಚಿತವಾಗಿ ವಿತರಣೆ ಮಾಡಬೇಕು ಎಂದು ರೈತ ಸಂಘದ ಜಿಲ್ಲಾ ಸಂಚಾಲಕ ಕಂಚೇನಹಳ್ಳಿ ಪ್ರಸನ್ನಕುಮಾರ್ ಒತ್ತಾಯಿಸಿದ್ದಾರೆ.