ಫೇಲಾದ ವಿಷಯ ತಿಳಿದು ವಿದ್ಯಾರ್ಥಿ ನಾಪತ್ತೆ
ಕನ್ನಡಪ್ರಭ ವಾರ್ತೆ ಹಾಸನ ಏ.6
8ನೇ ತರಗತಿಯಲ್ಲಿ ಅನುತ್ತೀರ್ಣನಾದ ವಿಷಯ ತಿಳಿದು ವಿದ್ಯಾರ್ಥಿಯೊಬ್ಬ ತನ್ನ ತಾಯಿಯೊಂದಿಗೆ ಶಾಲೆಗೆ ಬಂದು, ನಂತರ ನಾಪತ್ತೆಯಾದ ಘಟನೆ ನಗರದಲ್ಲಿ ನಡೆದಿದೆ. ತಾಲೂಕಿನ ಗಾಣಿಗರ ಹೊಸಳ್ಳಿ ವಾಸಿ ಪುಷ್ಪ ಎಂಬುವರ ಪುತ್ರ, ನಗರದ ಸಿಕೆಎಸ್ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಅಭಿಲಾಷ (13) ಎಂಬಾತನೇ ನಾಪತ್ತೆಯಾದವನು.ವಿದ್ಯಾರ್ಥಿ ತಾಯಿ ಪುಷ್ಪ ಅವರೊಂದಿಗೆ 8ನೇ ತರಗತಿಯ ಫಲಿತಾಂಶ ನೋಡಲು ಶಾಲೆಗೆ ಬಂದಿದ್ದು, ಫಲಿತಾಂಶ ನೋಡಿದ ಅಭಿಲಾಷ ತಾನು ಫೇಲಾಗಿದ್ದು ಕಂಡು ಬಂದಿದೆ. ನಂತರ ಇಬ್ಬರು ಊರಿಗೆ ಹೋಗಲೆಂದು ಹೊಸ ಬಸ್ ನಿಲ್ದಾಣ ಸಿಕೆಎಸ್ ಶಾಲೆ ಮುಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಜನರ ಮಧ್ಯೆ ಅಭಿಲಾಷ ನಾಪತ್ತೆಯಾಗಿದ್ದಾನೆ.5.3 ಅಡಿ ಎತ್ತರ, ಕೆಂಪುಬಣ್ಣ, ದುಂಡುಮುಖ, ಕನ್ನಡ ಮಾತನಾಡುತ್ತಾನೆ. ಮನೆಯಿಂದ ಹೋಗುವಾಗ ನೀಲಿ ಶರ್ಟ್, ನೀಲಿ ಬಣ್ಣದ ಜೀನ್ಸ ಪ್ಯಾಂಟ್ ಧರಿಸಿಸಿದ್ದ ಎಂದು ತಾಯಿ ಪುಷ್ಪ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಅಂದರ್ಬಾಹರ್: ನಾಲ್ವರ ಬಂಧನ
ಅರಸೀಕೆರೆ: ತಾಲೂಕಿನ ಕಣಕಟ್ಟೆ ಹೋಬಳಿಯ ದಿಬ್ಬೂರು ಗ್ರಾಮದ ರಂಗನಾಥಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.ದಿಬ್ಬೂರು ಗ್ರಾಮದ ರಂಗನಾಥ (35), ರಂಗಯ್ಯ (52), ತಿಪ್ಪೇಶ (40), ರಂಗನಾಥ (35) ಬಂಧಿತರು. ಅವರು ಜೂಜಾಟಕ್ಕಿಟ್ಟಿದ್ದ 970 ರು. ನಗದು ವಶಪಡಿಸಿ ಕೊಂಡಿರುವ ಬಾಣಾವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾಲೇಜಿಗೆ ಹೋದ ಯುವತಿ ನಾಪತ್ತೆ
ಹಾಸನ: ನಗರದ ಅಡ್ಲಿಮನೆ ರಸ್ತೆಯ ವಾಸಿ ಸಿದ್ದಮಲ್ಲಪ್ಪ ಎಂಬುವರ ಪುತ್ರಿ ಮಾನಸ (18) 2ನೇ ಸೆಮಿಸ್ಟರ್ಬಿಇ ಓದಲು ರಾಜೀವ್ ಕಾಲೇಜಿಗೆ ಹೋಗುತ್ತಿದ್ದು, ಎಂದಿನಂತೆ ಏ.3ರಂದು ಬೆಳಗ್ಗೆ 8ರಲ್ಲಿ ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಿಂದ ಹೋದವರು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.5 ಅಡಿ ಕೋಲುಮುಖ, ಸಾಧಾರಣಾ ಮೈಕಟ್ಟು, ಎಣ್ಣೆಗೆಂಪು ಬಣ್ಣ, ಬಲಗಡೆ ಹಣೆಯಲ್ಲಿ ಸಣ್ಣ ಗಾಯದ ಗುರುತಿದೆ. ಕನ್ನಡ ಇಂಗ್ಲಿಷ್, ಹಿಂದಿ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ನೀಲಿಬಣ್ಣದ ಚೂಡಿದಾರ್ ಧರಿಸಿದ್ದರು ಎಂದು ಆಕೆಯ ತಂದೆ ಸಿದ್ದಮಲ್ಲಪ್ಪ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.