'ಮನುಕುಲಕ್ಕೆ ಗಾಂಧಿ ತತ್ವ ಇಂದು ಅಗತ್ಯ'
ಚನ್ನರಾಯಪಟ್ಟಣ: ಮನುಕುಲಕ್ಕೆ ಗಾಂಧಿ ತತ್ವ ಇಂದು ಅಗತ್ಯವಾಗಿದೆ ಎಂದು ಬೆಂಗಳೂರಿನ ಗಾಂಧಿ ಭವನದ ಕಾರ್ಯದರ್ಶಿ ಪ್ರೊ. ಜಿ. ಬಿ. ಶಿವರಾಜ್ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಆಯೋಜಿಸಿದ್ದ ಸಾಮಾಜಿಕ ನ್ಯಾಯ ಕುರಿತಂತೆ ಮಹಾತ್ಮ ಗಾಂಧೀಜಿಯವರ ದೃಷ್ಟಿಕೋನ ಎಂಬ ವಿಷಯದ ಬಗ್ಗೆ ವಿಶೇಷ ಮಾಹಿತಿ ಉಪನ್ಯಾಸ ನೀಡಿದರು. ಮಕ್ಕಳಲ್ಲಿ ನಕಾರಾತ್ಮಕ ಭಾವನೆಯನ್ನು ಶಿಕ್ಷಕರು ಬಿತ್ತಬಾರದು. ಮಕ್ಕಳಿಗೆ ಸದಾ ಕಾಲ ಗುಣಾತ್ಮಕ ಭಾವನೆಗಳನ್ನು ಮೂಡಿಸಿ ಪ್ರೇರಣೆ ನೀಡಬೇಕು. ಗಾಂಧಿ ಶ್ರೀಮಂತರಾಗಿದ್ದರೂ ಕಡು ಬಡತನದ ಬದುಕು ಕಟ್ಟಿಕೊಂಡಿದ್ದರು. ಸತ್ಯ, ಅಹಿಂಸೆ, ಸಭ್ಯತೆಯ ಮಾರ್ಗದಿಂದ ಜಗತ್ತನ್ನು ಪರಿವರ್ತಿಸಬಹುದು. ಸರಳತೆ, ನಮ್ರತೆ, ನಗು, ಶಾಂತಿ, ಗೌರವಗಳಿಂದ ಗಾಂಧೀಜಿಯವರ ವಿಚಾರಗಳ ಚಿಂತನೆಯನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳ ಬೇಕು ಎಂದರು.