ರಾಜೀವ್ ವರ್ತನೆಗೆ ಬೇಸತ್ತು ರಾಜಿನಾಮೆ
ಮೈಸೂರು: ಕೃಷ್ಣರಾಜ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಎಚ್.ವಿ. ರಾಜೀವ್ ಅವರ ವರ್ತನೆಗೆ ಬೇಸತ್ತು ರಾಜಿನಾಮೆ ನೀಡುತ್ತಿರುವುದಾಗಿ ಕೆಜೆಪಿ ಮಹಿಳಾ ಘಟಕದ ನಗರಾಧ್ಯಕ್ಷೆ ಎಸ್.ಎನ್. ವೀಣಾ ಹೇಳಿದರು.
ಸುಮಾರು 20 ವರ್ಷದಿಂದ ಕಾಂಗ್ರೆಸ್ನಲ್ಲಿ ಕಾರ್ಯಕರ್ತೆಯಾಗಿದ್ದ ನನ್ನನ್ನು ಎಚ್.ವಿ. ರಾಜೀವ್ ಕರೆತಂದು ಕೆಜೆಪಿ ನಗರಾಧ್ಯಕ್ಷೆಯಾಗಿ ಮಾಡಿ, ಕಳೆದ ಮೂರು ತಿಂಗಳಿನಿಂದ ದುಡಿಸಿಕೊಂಡು ಈಗ ವಿನಾಕಾರಣ ಆ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ನಗರಪಾಲಿಕೆ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಬಯಸಿದ್ದ ನನಗೆ ಜಾತಿಯ ಕಾರಣವೊಡ್ಡಿ ಟಿಕೆಟ್ ತಪ್ಪಿಸಿದರು. ನಾನು ಬ್ರಾಹ್ಮಣ ಜಾತಿಗೆ ಸೇರಿದ್ದು, ನನ್ನ ಪತಿ ಹಿಂದುಳಿದ ವರ್ಗಕ್ಕೆ ಸೇರಿರುವ ಕಾರಣ ಈ ರೀತಿ ಮಾಡಲಾಯಿತು. ನಾನು ಅಂತರ್ಜಾತಿ ವಿವಾಹ ಮಾಡಿಕೊಂಡಿರುವುದೇ ತಪ್ಪಾಯಿತೆ ಎಂದು ಅವರು ಪ್ರಶ್ನಿಸಿದರು.
ಪಕ್ಷದಲ್ಲಿ ಯಾರಿಗೂ ಮರ್ಯಾದೆ ಕೊಡದೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದು, ಈಗಾಗಲೇ ಎಂಎಲ್ಎ ಅನ್ನುವಂತೆ ವರ್ತಿಸುತ್ತಿರುವುದು ನೋವು ತಂದಿದೆ. ಬೂತ್ ಮಟ್ಟದಲ್ಲಿ ಕಾರ್ಯನಿರ್ವಹಿಸಿ ಪಕ್ಷದ ಸಂಘಟನೆಗಾಗಿ ದುಡಿದಿದ್ದೇನೆ. ಅವರಿಂದಲೂ ರಾಜಿನಾಮೆ ಪಡೆಯಲಿ ಎಂದು ಆಗ್ರಹಿಸಿದ ಅವರು ರಾಜೀವ್ರಿಂದ ಕೆಜೆಪಿಗೆ ಯಾವ ಲಾಭವಿಲ್ಲ ಎಂದು ಹೇಳಿದರು.