ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅರಕಲಗೂಡು: ಚತುಷ್ಕೋನ ಸ್ಪರ್ಧೆ ಖಚಿತ

Rashmi Kasaragodu
Updated On : 7 Apr 2013, 11:27 am

ಅ.ರಾ. ಸುಬ್ಬರಾವ್
ಅರಕಲಗೂಡು: ನಿರೀಕ್ಷೆಯಂತೆಯೇ ಅರಕಲಗೂಡು ವಿಧಾನಸಭಾ ಕ್ಷೇತ್ರದ ರಾಜಕೀಯ ಚಿತ್ರಣ ಬದಲಾಗಿದೆ.ಇಲ್ಲಿನ ರಾಜಕೀಯ ಇತಿಹಾಸದಲ್ಲಿ ಹಿಂದೆಂದೂ ಏರ್ಪಡದ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆ ಸಜ್ಜಾಗಿದೆ.ಬಹುತೇಕ ಈ ಕ್ಷೇತ್ರದಲ್ಲಿ ಪಕ್ಷ ರಾಜಕಾರಣ ಕಂಡು ದಶಕಗಳೇ ಆಗಿದೆ.
ಇಲ್ಲಿ ವ್ಯಕ್ತಿ ರಾಜಕಾರಣಕ್ಕೇ ಮಹತ್ವ. ಅದರಂತೆ ಈ ಹಿಂದೆ ಎಚ್.ಎನ್.ನಂಜೇಗೌಡ ಮತ್ತು ಕೆ.ಬಿ.ಮಲ್ಲಪ್ಪ  ವ್ಯಕ್ತಿ ರಾಜಕಾರಣದಲ್ಲೇ ತಮ್ಮ ಸೋಲು ಗೆಲವು ಕಂಡಿದ್ದವರು. ಈಗ ಅವರಿಲ್ಲ. ಇತ್ತೀಚಿಗೆ ಕಾಂಗ್ರೆಸ್ನ ಎ.ಮಂಜು ಮತ್ತು ಜೆಡಿಎಸ್ನ ಎ.ಟಿ.ರಾಮಸ್ವಾಮಿ ವ್ಯಕ್ತಿ ಪ್ರತಿಷ್ಠೆಯ ರಾಜಕಾರಣ ನಡೆಸಿಕೊಂಡು ಬಂದವರೇ. ಇಲ್ಲಿನ ಮತದಾರರೂ ಅಷ್ಟೇ. ಪಕ್ಷಕ್ಕಿಂತ ವ್ಯಕ್ತಿಯನ್ನಾಧರಿಸಿ ಆರಿಸಿ ಕಳುಹಿಸಿದ್ದಾರೆ.ಅಲ್ಲದೇ ಒಮ್ಮೆ ಗೆಲ್ಲಿಸಿದವರನ್ನೇ ಎರಡನೇ ಬಾರಿಗೆ ಗೆಲ್ಲಿಸಿದ ಉದಾಹರಣೆ ಇಲ್ಲ.
ಆದರೆ ಈವರೆಗೆ ಎ.ಮಂಜು ಮತ್ತು ಎ.ಟಿ.ರಾಮಸ್ವಾಮಿ ಹೊರತು ಪಡಿಸಿ ಮತ್ತೊಬ್ಬ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡಬಹುದಾದ ಸಮರ್ಥ ಹಾಗೂ ಪ್ರಬಲ ಆಕಾಂಕ್ಷಿಗಳೆ ಬಂದಿರಲಿಲ್ಲ ಎಂದರೂ ತಪ್ಪಿಲ್ಲ. ಕ್ಷೇತ್ರದಲ್ಲಿ ಈ ಬಾರಿ ಚತುಷ್ಕೋನ ಸ್ಪರ್ಧೆ ಏರ್ಪಡುವುದಂತೂ ನಿಶ್ಚಿತ. ಕಾಂಗ್ರೆಸ್ನಿಂದ ಹಾಲಿ ಶಾಸಕ ಎ.ಮಂಜು, ಜೆಡಿಎಸ್ನಿಂದ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಸ್ಪರ್ಧಿಸುತ್ತಿದ್ದಾರೆ. ನಿವೃತ್ತ ಅಧಿಕಾರಿ ಯೋಗಾರವುಶ್ ಪಕ್ಷೇತರರಾಗಿ ಕಣಕ್ಕಿಳಿಯುವ ಸಲುವಾಗಿ ಬಾರೀ ಪ್ರಚಾರ ಮತ್ತು ಸಿದ್ದತೆ ನಡೆಸಿದ್ದಾರೆ. ಅದಕ್ಕಾಗಿ ಕಳೆದ ಒಂದೂವರೆ ವರ್ಷದಿಂದಲೇ ಸಂಘಟನೆಯಲ್ಲಿ ತೊಡಗಿದ್ದಾರೆ.
ಈ ನಡುವೆ ನಿವೃತ್ತ ಜಿಲ್ಲಾಧಿಕಾರಿ ಹಾಗೂ ಸಿದ್ದರಾಮಯ್ಯ ಪರಮಾಪ್ತರಲ್ಲಿ ಒಬ್ಬರಾದ ಅಣ್ಣೇಚಾಕನಹಳ್ಳಿ ಪುಟ್ಟಸ್ವಾಮಿ ಕಾಂಗ್ರೆಸ್ನಿಂದ ಟಿಕೆಟ್ ಬಯಸಿದ್ದರು. ಆದರೆ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಎ.ಮಂಜು ಗೆಲವು ಸಾಧಿಸಿದ ಬೆನ್ನಲ್ಲೇ ಪುಟ್ಟಸ್ವಾಮಿ ಕೆಜೆಪಿ ಸೇರಲು ಮುಂದಾಗಿದ್ದಾರೆ.
ಭಾನುವಾರ ಅಧಿಕೃತವಾಗಿ ಯಡಿಯೂರಪ್ಪನವರ ಕೆಜೆಪಿಯನ್ನು ತಮ್ಮ 200 ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಬೆಂಗಳೂರಿನಲ್ಲಿ ಸೇರ್ಪಡೆಗೊಂಡಿದ್ದಾರೆ.
ಚುನಾವಣೆ ಎದುರಿಸಲು  ಅಭ್ಯರ್ಥಿಯೊಬ್ಬರನ್ನು ಎದುರು ನೋಡುತ್ತಿದ್ದ ಕೆಜೆಪಿಗೆ ಪುಟ್ಟಸ್ವಾಮಿ ಬಂದದ್ದು, ಕ್ಷೇತ್ರದಲ್ಲಿ ಪಕ್ಷ ನೆಲೆಯೂರಲು ಸಹಕಾರಿಯಾದಂತಾಗಿದೆ. ಪುಟ್ಟಸ್ವಾಮಿ ಕೆಜೆಪಿ ಸೇರ್ಪಡೆ ವೇಳೆ ವೀರಶೈವ ಸಮುದಾಯದ ತಾಲೂಕು ಅಧ್ಯಕ್ಷ ಎನ್.ರವಿಕುಮಾರ್, ಮಾಗಲು ಬಸವರಾಜು ಸೇರಿದಂತೆ ಇನ್ನೂ ಹಲವು ವೀರಶೈವ ಮುಖಂಡರು ಭಾಗಿಗಳಾಗಿದ್ದರು.
ಯಾರಿಗೆ ಲಾಭ: ಸಿದ್ದರಾಮಯ್ಯ ಆಪ್ತ ಪುಟ್ಟಸ್ವಾಮಿ ಕೆಜೆಪಿ ಸೇರ್ಪಡೆಯಿಂದಾಗಿ ಕ್ಷೇತ್ರದಲ್ಲಿನ ಈವರೆಗಿನ ರಾಜಕೀಯ ಲೆಕ್ಕಾಚಾರಗಳಲ್ಲಿ ಹೊಸ ತಿರುವು ಪಡೆದಿದೆ.  ಕ್ಷೇತ್ರದಲ್ಲಿ ಪುಟ್ಟಸ್ವಾಮಿ ಯಾರ ಮತ ಕಸಿಯುತ್ತಾರೆ ಎಂಬುದು ಈ ಲೆಕ್ಕಾಚಾರದ ತಿರುಳು. ಕುರುಬ ಸಮುದಾಯಕ್ಕೆ ಸೇರಿದ ಅವರು ತಮ್ಮ ಸಮುದಾಯದ ಮತಗಳನ್ನು ಗಣನೀಯವಾಗಿ ಕಸಿಯುತ್ತಾರೆಂಬ ಲೆಕ್ಕಾಚಾರದ ಮಾತು  ಕೇಳಿಬರುತ್ತಿದೆ. ವ್ಯಕ್ತಿ ರಾಜಕಾರಣಕ್ಕೇ ಮಣೆ ಹಾಕುತ್ತಾ ಬಂದಿರುವ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ಫಲಕಾರಿಯಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.        
ಹಾಗೆಂದ ಮಾತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಏನೂ ಪೂರಾ ಸೇಫ್ ಅಲ್ಲ. ಸ್ವತಃ ಎ.ಟಿ.ರಾಮಸ್ವಾಮಿ ಅವರಿಗೆ ತಿಳಿದಿರುವಂತೆ ಪಕ್ಷದೊಳಗಿದ್ದೇ ಕಾಲೆಳೆಯುವವರ ಸಂಖ್ಯೆ ಹೆಚ್ಚಾಗಿಯೇ ಇದೆ. ಅದನ್ನೆಲ್ಲಾ ಸರಿದೂಗಿಸುವಲ್ಲಿ ಎಷ್ಟರ ಮಟ್ಟಿಗೆ ಅವರು ಸಫಲರಾಗುತ್ತಾರೆ ಎಂಬುದು ಕುತೂಹಲಕಾರಿ ಅಂಶ. ಒಟ್ಟಾರೆ, ಈ ಮುಂಚೆ ಕಾಂಗ್ರೆಸ್ನ ಎ.ಮಂಜು, ಜೆಡಿಎಸ್ನ ಎ.ಟಿ.ರಾಮಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಯೋಗಾರವುಶ್ ಸ್ಪರ್ಧಿಸುವ ಮೂಲಕ ತ್ರಿಕೋನ ಸ್ಪರ್ಧೆಯ ರಾಜಕೀಯ ಚಿತ್ರಣ ಈಗ ಬದಲಾಗಿದ್ದು, ಪುಟ್ಟಸ್ವಾಮಿ ಕೆಜೆಪಿಯಿಂದ ಕಣಕ್ಕಿಳಿಯುತ್ತಿರುವುದರಿಂದ ಕ್ಷೇತ್ರದಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಡುವುದು ನಿಶ್ಚಿತವಾಗಿದೆ.
ದೃವೀಕರಣ: ಇದು ರಾಜಕೀಯ ದೃವೀಕರಣದ ಕಾಲ. ಕ್ಷೇತ್ರದಲ್ಲಿ ನಿನ್ನೆ ಒಂದು ಪಕ್ಷದಲ್ಲಿ ಇದ್ದವರು ಇಂದು ಇನ್ನೊಂದು ಪಕ್ಷದಲ್ಲಿ ಕಾಣುತ್ತಿದ್ದಾರೆ. ಇಂತಹ ಪಕ್ಷಾಂತರ ಚಟುವಟಿಕೆಗಳು ನಡೆದಿರುವುದು ಕಾಂಗ್ರೆಸ್ ಹಾಗೂ ಜೆಡಿಎಸ್ನಲ್ಲಿ. ಈ ಎರಡೂ ಪಕ್ಷದಲ್ಲಿ ನಿರ್ಲಕ್ಷಕ್ಕೆ ಒಳಗಾದವರು ಇಲ್ಲವೇ ಮುಖಂಡರ ವರ್ತನೆಯಿಂದ ಬೇಸತ್ತವರು ಈಗ ಹೊಸ ದಿಕ್ಕಿನತ್ತ ಮುಖ ಮಾಡಿದ್ದಾರೆ. ಪೊಟ್ಯಾಟೋ ಕ್ಲಬ್ ಯೋಗಾರವುಶ್ಹಾಗೂ ಪುಟ್ಟಸ್ವಾಮಿ ಅವರತ್ತ ಒಲವು ತೋರಲಾರಂಭಿಸಿದ್ದಾರೆ. ಆದರೆ ಈ ಮುಖಂಡರ ಸೇರ್ಪಡೆ ಮತ ಗಳಿಕೆಗೆ ಎಷ್ಟು ಸಹಕಾರಿ ಎಂಬುದನ್ನು ಕಾದುನೋಡಬೇಕಿದೆ.
ಪ್ರಸಕ್ತ ಸನ್ನಿವೇಶದಲ್ಲಿ ಕಾಂಗ್ರೆಸ್ ಜೆಡಿಎಸ್ ಎರಡೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ತುಸು ಆತಂಕಕ್ಕೆ ಕಾರಣರಾಗಿರುವವರು ಹೊಸ ಮುಖಗಳು ಎಂಬುದು ಕುತೂಹಲ ಅಂಶ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement