ಆಟೋ ಪಲ್ಟಿ: ಬೆಂಗಳೂರು ನಿವಾಸಿ ಸಾವು
ನಾಗಮಂಗಲ: ಆಟೋ ಪಲ್ಟಿ ಹೊಡೆದು ಓರ್ವ ಮೃತಪಟ್ಟು ಮೂರು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಕೋಟೆಬೆಟ್ಟದ ಶ್ರೀಕಂಬದ ನರಸಿಂಹಸ್ವಾಮಿ ದೇವಸ್ಥಾನದ ಬಳಿ ಶನಿವಾರ ಸಂಜೆ ನಡೆದಿದೆ. ತಾಲೂಕಿನ ಕೆಂಚೇಗೌಡನಕೊಪ್ಪಲು ಗ್ರಾಮದ ಬೆಂಗಳೂರು ನಿವಾಸಿ ಪಾಪೇಗೌಡ (60) ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಗಾಯಗೊಂಡಿರುವ ಮೂವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಟೆಬೆಟ್ಟ ಗ್ರಾಮದ ಶ್ರೀಕಂಬದ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ವಾಪಸ್ ತೆರಳುವ ವೇಳೆ ಆಟೋ ಬ್ರೇಕ್ ವಿಫಲಗೊಂಡು ಈ ಘಟನೆ ನಡೆದಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.