ಕಾಂಗ್ರೆಸ್ ಕಚೇರಿ ಮುತ್ತಿಗೆ
ಕನ್ನಡಪ್ರಭ ವಾರ್ತೆ ಹಾಸನ ಏ. 8
ಸಕಲೇಶಪುರ-ಆಲೂರು-ಕಟ್ಟಾಯ ವಿಧಾನಸಭಾ ಕ್ಷೇತ್ರದಿಂದ ಹೊರ ಜಿಲ್ಲೆಯವರಾದ ಡಿ.ಮಲ್ಲೇಶ್ ಅವರಿಗೆ ಟಿಕೆಟ್ ನೀಡಿರುವುದನ್ನು ಖಂಡಿಸಿ ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಸೋಮವಾರ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಡಿ.ಸಿ.ಸಣ್ಣಸ್ವಾಮಿ, ಕೆಲವತ್ತಿ ಸೋಮಶೇಖರ್ ಹಾಗೂ ರಾಜ್ಯ ಮಹಿಳಾ ನಾಯಕಿ ಮೋಟಮ್ಮರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೂ ಮೊದಲು ಸಕಲೇಶಪುರ ಹಾಗೂ ಆಲೂರು ತಾಲೂಕು ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ನಂತರ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕಿದರು.
ಸಕಲೇಶಪುರ-ಆಲೂರು-ಕಟ್ಟಾಯವ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ ಕಲ್ಪಿಸಬೇಕು ಎಂದ ಕಾಂಗ್ರೆಸ್ ಕಾರ್ಯಕರ್ತರು, ಈ ಮೀಸಲು ಕ್ಷೇತ್ರದಿಂದ ಡಿ.ಮಲ್ಲೇಶ್ಗೆ ಟಿಕೆಟ್ ನೀಡಿರುವುದು ಸರಿಯಲ್ಲ. ಇದರಿಂದ ಕ್ಷೇತ್ರದ ಪದಾಧಿಕಾರಿಗಳಲ್ಲಿ ಅಸಮಾದಾನ ಉಂಟಾಗಿದೆ. ಕೂಡಲೇ ಪಕ್ಷದ ರಾಜ್ಯ ಹಾಗೂ ರಾಷ್ಟ್ರ ನಾಯಕರು ತಮ್ಮ ನಿರ್ಣಯ ಬದಲಾಯಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೊಡಕುಂಟಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಮಲ್ಲೇಶ್ ಡಮ್ಮಿ ಅಭ್ಯರ್ಥಿ: ಆದರೆ, ಮಲ್ಲೇಶ್ ವಿರುದ್ಧದ ಆರೋಪಗಳು ನಿರಾಧಾರ ಎಂದು ಮಲ್ಲೇಶ್ ಅವರೇ ತಮ್ಮ ಹಿಂಬಾಲಕರಿಂದ ಹೇಳಿಕೆ ನೀಡಿಸಿದ್ದಾರೆ. ಈ ರೀತಿ ಸುಳ್ಳು ಹೇಳಿಕೆ ನೀಡುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುತ್ತಿರುವ ಮಲ್ಲೇಶ್ ಚುನಾವಣೆಯಲ್ಲಿ ಗೆಲ್ಲುವ ಶಕ್ತಿ ಹೊಂದಿಲ್ಲ. ಅವರೊಬ್ಬ ಡಮ್ಮಿ ಅಭ್ಯರ್ಥಿ. ಇದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಖಂಡಿತ ಹಿನ್ನೆಡೆಯಾಗಲಿದೆ ಎಂದು ಹೇಳಿದರು.
ಕಾಂಗ್ರೆಸ್ ನಡಿಗೆ ಜನರ ಬಳಿಗೆ ಕಾರ್ಯಕ್ರಮವನ್ನು ಮಲ್ಲೇಶ್ ಹೋಬಳಿಯ ಮಟ್ಟದಲ್ಲಿ ನಡೆಸಿಲ್ಲ. ಟಿಕೆಟ್ ಪಡೆಯುವ ದೃಷ್ಟಿಯಿಂದ ಸುಳ್ಳು ಪ್ರಚಾರ ಮಾಡಿದ್ದಾರೆ. ಕೇವಲ ಬೆರಳೆಣಿಕೆಯಷ್ಟು ಗ್ರಾಮಗಳಿಗೆ ತೆರಳಿ ಕಾರ್ಯಕ್ರಮ ನಡೆಸಿದರೆ ಮಾತ್ರ ಪಕ್ಷ ಸಂಘಟನೆ ಸಾಧ್ಯವಿಲ್ಲ. ಅನೇಕ ವರ್ಷಗಳಿಂದ ಪಕ್ಷ ಸಂಘಟನೆಗೆ ಶ್ರಮಿಸುತ್ತಿರುವ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದರು.
ಗೆಲ್ಲುವುದು ಕಷ್ಟ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಾಲಾವಧಿಯಲ್ಲಿ ಬೇಲೂರು ಕ್ಷೇತ್ರದಿಂದ ಸ್ಪರ್ಧಿಸಿ ಹೆಚ್ಚಿನ ಮತಗಳ ಅಂತರರಿಂದ ಮಲ್ಲೇಶ್ ಸೋತಿದ್ದರು. ಇಲ್ಲಿಯೂ ಅವರು ಸೋಲು ಅನುಭವಿಸುವುದು ಖಚಿತ. ಈ ಬಾರಿ ಸ್ಥ್ಥಳೀಯ ಹಾಗೂ ಗೆಲ್ಲುವಂಥ ಅಭ್ಯರ್ಥಿಗೆ ಟಿಕೆಟ್ ನೀಡಿದ್ದೇ ಆದಲ್ಲಿ ಹೆಚ್ಚಿನ ಮತ ಗಳಿಸಲು ಶಕ್ತಿಮೀರಿ ನಾವೆಲ್ಲರೂ ಕೆಲಸ ಮಾಡುತ್ತೇವೆ. ಡಿ.ಮಲ್ಲೇಶ್ಗೆ ಕ್ಷೇತ್ರದಲ್ಲಿ ವರ್ಚಸ್ ಇಲ್ಲ. ಅವರು ಗೆಲ್ಲುವುದು ಕಷ್ಟವಾಗಿದ್ದು, ಅವರು ಡಮ್ಮಿ ಅಭ್ಯರ್ಥಿಯಾಗಿದ್ದಾರೆ. ಅಷ್ಟೇ ಅಲ್ಲದೆ ಅವರು ಜೆಡಿಎಸ್ ಅಭ್ಯರ್ಥಿ ಎಚ್.ಕೆ.ಕುಮಾರಸ್ವಾಮಿ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು. ಆದ್ದರಿಂದ ಸಕಲೇಶಪುರ-ಆಲೂರು-ಕಟ್ಟಾಯ ವಿಧಾನಸಭಾ ಕ್ಷೇತ್ರದಿಂದ ಡಿ.ಸಿ.ಸಣ್ಣಸ್ವಾಮಿ, ಕೆಲವೆತ್ತಿ ಸೋಮಶೇಖರ್ ಅಥವಾ ರಾಜ್ಯ ಮಹಿಳಾ ನಾಯಕಿ ಮೋಟಮ್ಮ ಅವರಲ್ಲಿ ಯಾರಿಗಾದರೂ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡ ಕೆಲವೆತ್ತಿ ಸೋಮಶೇಖರ್, ಜಿಲ್ಲಾ ಎಸ್ಸಿಎಸ್ಟಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಗ್ರಾಪಂ ಮಾಜಿ ಉಪಾಧ್ಯಕ್ಷ ನಾಯಕರಹಳ್ಳಿ ಅಶೋಕ್, ಸಾಲಗಾಮೆ ಪ್ರಕಾಶ್, ಕುಮಾರಸ್ವಾಮಿ, ಗೊರೂರು ಮಂಜುನಾಥ್, ನಿಂಗರಾಜು, ಮಲ್ಲೇಶ್ಗೌಡ, ಮಂಜೇಗೌಡ, ಕುಮಾರ್, ನಾಗರಾಜು, ಮೋಹನ್, ರಾಮೇಗೌಡ, ಮೂಡಲಯ್ಯ, ಸುರೇಶ್, ರಾಜು, ಪ್ರವೀಣಕುಮಾರ್ ಇತರರು ಇದ್ದರು.
ನಿಷ್ಠಾವಂತರಿಗೆ ಅನ್ಯಾಯ ಎಸಗಿದಂತೆ
ಸುಮಾರು 20 ರಿಂದ 25 ವರ್ಷಗಳಿಂದಲೂ ಸತತವಾಗಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಾಗಿ ಸಾಕಷ್ಟು ದುಡಿದಿದ್ದೇವೆ. ಸಕಲೇಶಪುರ-ಆಲೂರು-ಕಟ್ಟಾಯ ಮೀಸಲು ಕ್ಷೇತ್ರದಲ್ಲಿ ಹಲವಾರು ಬಾರಿ ಸಂಚರಿಸಿ ರೈತರ ಹಾಗೂ ದಲಿತರ ಸಂಕಷ್ಟಗಳನ್ನು ಅರಿತು ಹೋರಾಟ ನಡೆಸಿದ್ದೇವೆ. ಈ ಮೂಲಕ ಜನಸಂಘಟನೆಯಲ್ಲಿ ಹೆಚ್ಚಿನ ವಿಶ್ವಾಸಗಳಿಸಿದ್ದೇವೆ. ಪಕ್ಷದ ಬಲವರ್ಧನೆಗೆ ಶ್ರಮಿಸಿದವರಿಗೆ ಟಿಕೆಟ್ ನೀಡದೇ ಹಾಗೂ ಪಕ್ಷಕ್ಕಾಗಿ ಏನೂ ದುಡಿಯದವರಿಗೆ ಟಿಕೆಟ್ ನೀಡುವ ಮೂಲಕ ನಿಷ್ಠಾವಂತರಿಗೆ ಅನ್ಯಾಯ ಎಸಗಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಪಡಿಸಿದರು. ಟಿಕೆಟ್ ಪಡೆದಿರುವ ಡಿ.ಮಲ್ಲೇಶ್ ಕಳೆದ 28 ವರ್ಷಗಳಿಂದ ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದಿದ್ದಾರೆ. ಯಾವುದೇ ಅಪೇಕ್ಷೆ ಪಡೆಯದೇ ಪ್ರಾಮಾಣಿಕವಾಗಿ ದುಡಿದು, ಕೆಳಮಟ್ಟದಿಂದ ಪಕ್ಷ ಸಂಘಟನೆಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದು ಅವರ ಹಿಂಬಾಲಕರು ಪ್ರಚಾರ ಮಾಡುತ್ತಿದ್ದಾರೆ. ಆದರೆ ಮಲ್ಲೇಶ್ ಮೂಲತಃ ತುಮಕೂರು ಜಿಲ್ಲೆಯವರು. ಅಲ್ಲಿಂದ ಇಲ್ಲಿ ಬಂದು ನೆಲೆಸಿದ್ದಾರೆ. ಕೆಳಮಟ್ಟದಿಂದ ಅವರು ಕಾಂಗ್ರೆಸ್ನಲ್ಲಿ ದುಡಿದವರಲ್ಲ ಎಂದು ದೂರಿದರು.