ಕಾನ್ಸ್ಟೇಬಲ್ ಮೇಲೆ ಇನ್ಸ್ಪೆಕ್ಟರ್ ಹಲ್ಲೆ
ಕನ್ನಡಪ್ರಭ ವಾರ್ತೆ ಹಾಸನ ಏ. 7
ಜಿಲ್ಲಾ ಸಶಸ್ತ್ರ ಪಡೆ ಇನ್ಸ್ಪೆಕ್ಟರ್ರೊಬ್ಬರು ಕಾನ್ಸ್ಟೇಬಲ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ನಗರದ ಸೆಂಟ್ ಫಿಲೋಮಿನಾ ಶಾಲೆ ಬಳಿ ಭಾನುವಾರ ಸಂಜೆ ನಡೆದಿದೆ. ಕಾನ್ಸ್ಟೇಬಲ್ ರವಿ ತಮ್ಮ ಮೇಲಾಧಿಕಾರಿಯಿಂದಲೇ ಹಲ್ಲೆ ಒಳಗಾದವರು.
ಘಟನೆ ವಿವರ: ಹೊಳೆನರಸೀಪುರದಿಂದ ಜೆಡಿಎಲ್ಪಿ ನಾಯಕ ಎಚ್.ಡಿ.ರೇವಣ್ಣಗೆ ಬೆಂಗಾವಲು ವಾಹನ ಜಿಪ್ಸಿಯಲ್ಲಿ ಡಿಎಆರ್ ಸಹಾಯಕ ಸಬ್ಇನ್ಸ್ಪೆಕ್ಟರ್ ಯೋಗೇಶ್ ನಾಯಕ್ ಬರುತ್ತಿದ್ದರು. ಈ ವಾಹನದ ಚಾಲಕರಾಗಿದ್ದ ಕಾನ್ಸ್ಟೇಬಲ್ ರವಿ, ಸೆಂಟ್ ಫಿಲೋಮಿನಾ ಶಾಲೆ ಬಳಿ ಮೊಬೈಲ್ನಲ್ಲಿ ಮಾತನಾಡಿಕೊಂಡು ರಸ್ತೆಗೆ ಅಡ್ಡಲಾಗಿ ಬಂದ ಯುವಕನಿಗೆ ಅತ್ತ ಹೋಗು ಎಂದು ಹೇಳಿದರು.
ಇದರಿಂದ ಕುಪಿತರಾದ ನಾಯಕ್, ನೀನೇನು ಟ್ರಾಫಿಕ್ ಪೊಲೀಸಾ ನಡಿ ಸುಮ್ಮನೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ರವಿ ಇನ್ನೊಂದು ಸ್ವಲ್ಪ ಮುಂದೆ ಬಂದಿದ್ದರೆ ಮೊಬೈಲ್ನಲ್ಲಿ ಮಾತನಾಡಿಕೊಂಡು ಬರುತ್ತಿದ್ದ ಯುವಕ ತಮ್ಮ ಜಿಪ್ಸಿಗೆ ಡಿಕ್ಕಿ ಹೊಡೆಯುತ್ತಿದ್ದ. ಅದಕ್ಕೆ ಅತ್ತ ಹೋಗು ಅಂತ ಹೇಳಿದೆ ಎಂದು ತಿಳಿಸಿದರು.
ಇದಕ್ಕೆ ಕೂಡಲೇ ನಾಯಕ್, ತಮ್ಮಲ್ಲಿದ್ದ ಪಿಸ್ತೂಲಿನಿಂದ ರವಿಯ ಮೂಗು, ಹಣೆಗೆ ಥಳಿಸಿದರು. ಇದರಿಂದ ತೀವ್ರ ರಕ್ತಸ್ರಾವವಾಗುತ್ತಿದ್ದರೂ ರವಿ ಅವರು, ರೇವಣ್ಣರನ್ನು ಅವರು ಹೋಗುವ ಸ್ಥಳಕ್ಕೆ ಬಿಟ್ಟು ನಂತರ ನೇರವಾಗಿ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿ ಚಿಕಿತ್ಸೆ ಪಡೆದರು. ತಮ್ಮ ಮೇಲೆ ಹಲ್ಲೆ ನಡೆಸಿದ ಸಹಾಯಕ ಸಬ್ ಇನ್ಸ್ಪೆಕ್ಟರ್ ವಿರುದ್ಧ ರವಿ ದೂರು ನೀಡಿದ್ದಾರೆ.