ಜಿಲ್ಲಾ ಸರ್ಕಾರಿ ನೌಕರರ ಸರ್ವ ಸದಸ್ಯರ ಸಭೆ
ಕ.ಪ್ರ.ವಾರ್ತೆ ಹಾಸನ ಏ.7
ನಗರದ ವೆಂಕಟಾದ್ರಿ ಕನ್ವೆಷನ್ ಸಭಾಂಗಣದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ 2011-12ರ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಿತು.
ಸಂಘದ ಅಧ್ಯಕ್ಷ ಕೆ.ಸಿ.ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದು, ಸದಸ್ಯರಿಗೆ ಆದಷ್ಟು ಜಾಗೃತಿ ವಹಿಸಿ ಅತೀ ಕಡಿಮೆ ಹಣದಲ್ಲಿ ನಿವೇಶನ ಕೊಡಿಸುವುದು ತಮ್ಮ ಆದ್ಯ ಕರ್ತವ್ಯ ಎಂದರು. ಈಗಾಗಲೇ ಬೇಲೂರು ರಸ್ತೆಯಲ್ಲಿ ಸೂಕ್ತ ಜಾಗವನ್ನು ಪರಿಶೀಲಿಸಿದ್ದು, ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಗೌರವಾಧ್ಯಕ್ಷ ಎಂ.ಆರ್. ಗೌಡಪ್ಪ ಮಾತನಾಡಿ, ಪದಾಧಿಕಾರಿಗಳು ನಿವೇಶನ ಗೊತ್ತುಪಡಿಸಲು ಶ್ರಮ ವಹಿಸಿದ್ದು, ಇದಕ್ಕೆ ಸಂಘದ ಅಧ್ಯಕ್ಷ ರಂಗಸ್ವಾಮಿ ಸಂಪೂರ್ಣ ಸಹಕಾರ ನೀಡಿದ್ದು, ಶೀಘ್ರವೇ ಕಾರ್ಯರೂಪಕ್ಕೆ ಬರಲಿದೆ ಎಂದರು.
ಸಂಘದ ಕಾನೂನು ಸಲಹೆಗಾರ ಕೆ.ಎಸ್.ಶ್ಯಾಮಸುಂದರ್ ಮಾತನಾಡಿ, ನಿವೇಶನ ಕೊಳ್ಳುವಾಗ ಉದ್ಭವಿಸಬಹುದಾದ ಕಾನೂನು ರೂಪುರೇಷೆಗಳನ್ನು ಸಭೆಗೆ ವಿವರಿಸಿದರು. ಈಗ ನೋಡಿರುವ ನಿವೇಶನದ ಎಲ್ಲಾ ಕಾಗದ ಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಮುಂದೆ ಯಾವ ಸದಸ್ಯರಿಗೂ ನಿವೇಶನದ ಬಗ್ಗೆ ತೊಂದರೆ ಆಗಬಾರದು ಎಂಬುದು ಮೂಲ ಉದ್ದೇಶ. ಈ ಹಿನ್ನೆಲೆಯಲ್ಲಿ ಕಾರ್ಯರೂಪಕ್ಕೆ ಬರಲು ತಡವಾಗುತ್ತಿದೆ ಎಂದು ತಿಳಿಸಿದರು. ಸಂಘದ ಕಾರ್ಯದರ್ಶಿ ಕೆ.ಸಿ.ಬಸವರಾಜು ವಾರ್ಷಿಕ ವರದಿ ಓದಿದರು. ಉಪಾಧ್ಯಕ್ಷ ಎಂ.ನಾಗರಾಜು, ತಹಸೀಲ್ದಾರ್, ನಿರ್ದೇಶಕಿ ಶಾರದಾಂಬ, ನಿರ್ದೇಶಕ ಜೆ.ಬಿ.ನಾಗರಾಜ್, ವಿ.ಸತೀಶ್, ಎಚ್.ವಿ.ಪಾಲಾಕ್ಷ, ಕೆ.ಟಿ.ಸತ್ಯಮೂರ್ತಿ, ಎನ್.ಸಿ.ದೇವೇಗೌಡ, ಕೆ.ಟಿ.ದ್ರುವಕುಮಾರ್ ಇದ್ದರು. ಪ್ರವಾಸೋದ್ಯಮ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಬೋರೇಗೌಡ ಪ್ರಾರ್ಥಿಸಿದರು. ಜೆ.ಬಿ.ನಾಗರಾಜು ಸ್ವಾಗತಿಸಿದರು.