ಪೊಲೀಸರಿಂದ ಪಥ ಸಂಚಲನ
ಕನ್ನಡಪ್ರಭ ವಾರ್ತೆ ಹಾಸನ ಏ.7
ಚುನಾವಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪೊಲೀಸ್ ತುಕಡಿಗಳು ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಭಾನುವಾರ ಪಥಸಂಚಲನ ನಡೆಸಿದವು.
ಡಿಎಆರ್ ಮೈದಾನ ಬಳಿಯಿಂದ ಹೊರಟ ಕೆಎಸ್ಆರ್ಪಿ ತುಕಡಿ, ಸಶಸ್ತ್ರ ಮೀಸಲು ಪಡೆ, ವಿಶೇಷ ಪ್ರಹಾರ ದಳ ಹಾಗೂ ನಾಗರಿಕ ಪೊಲೀಸರು, ಶಸ್ತ್ರ ಸಜ್ಜಿತರಾಗಿ ಪಥಸಂಚಲನ ನಡೆಸಿದರು.
ನಗರದ ಎನ್.ಆರ್ ವೃತ್ತ, ಪೆನಷನ್ ಮೊಹಲ್ಲಾ, ಶ್ರೀನಗರ, ಹಳೆ ಬಸ್ ನಿಲ್ದಾಣ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಪೊಲೀಸ್ ತುಕಡಿಗಳು ಶಿಸ್ತು ಬದ್ದವಾಗಿ ಸಂಚರಿಸಿದವು. ಶಸ್ತ ಸಜ್ಜಿತರಾಗಿ, ಶಿಸ್ತು ಬದ್ದವಾಗಿ ರಸ್ತೆಯಲ್ಲಿ ಸಾಗುತ್ತಿದ್ದ ಪೊಲೀಸರನ್ನು ಜನ ಒಂದು ಕ್ಷಣ ನಿಂತು ನೋಡುತ್ತಿದ್ದರು.
ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಸಮಾಜ ವಿರೋಧಿ ಶಕ್ತಿಗಳಿಗೆ ಎಚ್ಚರಿಕೆ ನೀಡುವ ಮತ್ತು ಜನ ಸಾಮಾನ್ಯರಿಗೆ ಸೂಕ್ತ ರಕ್ಷಣಾ ವ್ಯವಸ್ಥೆ ಬಗ್ಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಪಥಸಂಚಲನ ಆಯೋಜಿಸಲಾಗಿತ್ತು.