ಸುಮೋ-ಕಾರು ಡಿಕ್ಕಿ: ಇಬ್ಬರಿಗೆ ಗಾಯ
ನಾಗಮಂಗಲ: ಟಾಟಾ ಸುಮೋ ಮತ್ತು ಟಾಟಾ ಇಂಡಿಕಾ ಕಾರು ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಇಬ್ಬರು ಗಾಯಗೊಂಡಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ದೇವಿಹಳ್ಳಿ ಬಳಿ ಭಾನುವಾರ ಬೆಳಿಗ್ಗೆ ನಡೆದಿದೆ. ಬೆಂಗಳೂರಿನ ಕಾಮಾಕ್ಷಿಪಾಳ್ಯದ ಜಾಮಣ್ಣ ಮತ್ತು ಚಾಲಕ ಚೇತನ್ ಅಪಘಾತದಲ್ಲಿ ಗಾಯಗೊಂಡವರು. ಜಾಮಣ್ಣ ಮತ್ತು ಚೇತನ್ ಇಂಡಿಕಾ ಕಾರಿನಲ್ಲಿ ಹಾಸನಕ್ಕೆ ತೆರಳುತ್ತಿದ್ದರು. ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಆರೋಗ್ಯ ಇಲಾಖೆಗೆ ಸೇರಿದ ಟಾಟಾ ಸುಮೋ ವಾಹನ ಎದುರಿನಿಂದ ಬರುತ್ತಿದ್ದ ಇಂಡಿಕಾ ಕಾರಿಗೆ ಢಿಕ್ಕಿ ಹೊಡೆದಿದೆ. ಗಾಯಗೊಂಡ ಇಬ್ಬರನ್ನು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.