'ಇಂದು ನೈತಿಕ ಶಿಕ್ಷಣ ಅನಿವಾರ್ಯ'
ಕ.ಪ್ರ. ವಾರ್ತೆ ಅರಸೀಕೆರೆ ಏ.8
ವಿದ್ಯಾರ್ಥಿಗಳಿಗಿಂದು ಶಿಕ್ಷಣದೊಂದಿಗೆ ನೈತಿಕ ಶಿಕ್ಷಣ ನೀಡುವ ಅನಿವಾರ್ಯತೆ ಇದೆ ಎಂದು ಶಿಕ್ಷಕಿ ಸುಶೀಲ ಅಭಿಪ್ರಾಯಪಟ್ಟಿದ್ದಾರೆ. ಅವರು ಬಿ.ಎಚ್.ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮುದಾಯದತ್ತ ಶಾಲೆ ಹಾಗೂ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದೆ ಅವಿಭಕ್ತ ಕುಟುಂಬದಲ್ಲಿ ಅಜ್ಜ, ಅಜ್ಜಿ ಹಾಗೂ ಹಿರಿಯರು ಮನೆಯಲ್ಲಿ ಇರುತ್ತಿದ್ದರು. ಮಕ್ಕಳಿಗೆ ನೀತಿಕಥೆಗಳನ್ನು ಹೇಳುವುದರ ಮೂಲಕ ಮಕ್ಕಳಲ್ಲಿ ನೈತಿಕತೆ ಬಗ್ಗೆ ಅರಿವು ಮೂಡಿಸುತ್ತಿದ್ದರು. ಇಂದು ದೃಶ್ಯ ಮಾಧ್ಯಮಗಳು ಹಾಗೂ ತಂದೆ ತಾಯಿಯರು ದುಡಿಮೆಗೆ ತೆರಳುವುದರಿಂದ ಮತ್ತು ವಿಭಕ್ತ ಕುಟುಂಬಗಳಾಗಿ ಮಕ್ಕಳಿಗೆ ಬಾಲ್ಯದ ಸವಿಯಿಂದ ವಂಚಿತರಾಗುತ್ತಿದ್ದಾರೆ ಎಂದರು. ವಿದ್ಯಾರ್ಥಿಗಳು ಟಿವಿಯಿಂದ ದೂರವಿದ್ದು ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದ ಅವರು ಶಾಲಾ ಅವಧಿಯಲ್ಲಿ ಶಿಕ್ಷಕರು ತಮ್ಮ ಕರ್ತವ್ಯ ಪ್ರಾಮಾಣಿಕವಾಗಿ ನಿರ್ವಹಿಸಿದ್ದರೂ ಮನೆಯಲ್ಲಿ ಕಲಿಕೆಗೆ ಅಗತ್ಯ ವಾತಾವರಣ ಸೃಷ್ಟಿಸಿಕೊಡುವ ನಿಟ್ಟಿನಲ್ಲಿ ಮತ್ತು ಮಕ್ಕಳ ಓದಿನ ಮೇಲೆ ಗಮನವಿಡಬೇಕೆಂದು ಪೋಷಕರಲ್ಲಿ ಮನವಿ ಮಾಡಿದರು.
ಮುಖ್ಯ ಶಿಕ್ಷಕ ಸೋಮಶೇಖರ್ ಮಾತನಾಡಿ, ಸರ್ಕಾರ ಪ್ರಾಥಮಿಕ ಶಿಕ್ಷಣಕ್ಕಾಗಿ ನೀಡುತ್ತಿರುವ ಸೌಲಭ್ಯಗಳನ್ನು ತಮ್ಮ ಮಕ್ಕಳಿಗೆ ದೊರಕಿಸಿಕೊಡುವಲ್ಲಿ ಪೋಷಕರು ಆಸಕ್ತಿ ವಹಿಸಬೇಕು ಎಂದ ಅವರು ಮಕ್ಕಳ ಓದಿನ ಪ್ರಗತಿಯ ಬಗ್ಗೆ ಬೇಸಿಗೆ ರಜೆಯಲ್ಲಿಯೂ ಬಿಸಿಯೂಟ ಯೋಜನೆ ಮುಂದುವರೆಯಲಿದ್ದು ರಜಾ ವೇಳೆ ಮಕ್ಕಳಿಗೆ ಗ್ರಂಥಾಲಯ ಪುಸ್ತಕಗಳ ಬಳಕೆ, ಕರಕುಶಲತೆ, ಕ್ರೀಡೆ ಮೊದಲಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿಕೊಡುವಂತೆ ತಿಳಿಸಿದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು. ಪೋಷಕರಾದ ಸರೋಜ, ಮಮತ ಮಾತನಾಡಿ, ಶಾಲೆಯಲ್ಲಿ ಉತ್ತಮ ಬೋಧಕ ವರ್ಗವಿದ್ದು ಒಳ್ಳೆಯ ಶಿಕ್ಷಣ ಮಕ್ಕಳಿಗೆ ದೊರೆಯುತ್ತಿದೆ ಎಂದ ಅವರು ಮಕ್ಕಳಿಗೆ ಹೋಂವರ್ಕ್ ಕೊಡಿ. ಇದರಿಂದ ಎರಡು ಬಗೆಯ ಅನುಕೂಲವಿದೆ ಎಂದರು.
ಶಾಲಾಭಿವೃದ್ಧಿ ಸಮಿತಿ ಸದಸ್ಯ ಲೋಕನಾಯಕ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ವೀಣಾ ನಿರೂಪಿಸಿದರು. ಶಿಕ್ಷಕ ಚಂದ್ರೇಗೌಡ ಸ್ವಾಗತಿಸಿದರು. ಶಿಕ್ಷಕಿ ಜ್ಯೋತಿಲಕ್ಷ್ಮೀ ವಂದಿಸಿದರು.