ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

15ಕ್ಕೆ ರೇವಣ್ಣ ಸೇರಿ ಆರು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

Rashmi Kasaragodu
Updated On : 10 Apr 2013, 12:19 pm

ಹಾಸನ: ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಲ್ಪಿ ನಾಯಕ ಎಚ್.ಡಿ.ರೇವಣ್ಣ ಮತ್ತು ಹಾಸನ ಕ್ಷೇತ್ರದಿಂದ ಎಚ್.ಎಸ್. ಪ್ರಕಾಶ್ ಸೇರಿದಂತೆ 6 ಕ್ಷೇತ್ರಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ.
ಅಲ್ಲದೇ ಸಕಲೇಶಪುರದಿಂದ ಎಚ್.ಕೆ. ಕುಮಾರಸ್ವಾಮಿ, ಅರಸೀಕೆರೆಯಿಂದ ಕೆ.ಎಂ. ಶಿವಲಿಂಗೇಗೌಡ, ಚನ್ನರಾಯಪಟ್ಟಣದಿಂದ ಸಿ.ಎನ್. ಬಾಲಕೃಷ್ಣ ಮತ್ತು ಅರಕಲಗೂಡಿನಿಂದ ಎ.ಟಿ.ರಾಮಸ್ವಾಮಿ ಅವರು ಕೂಡ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದಿದೆ.  ಹಾಸನ ಮತ್ತು ಬೇಲೂರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿರುವ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎರಡೂ ಕ್ಷೇತ್ರಗಳ ಮುಖಂಡರೊಡನೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೆಲ ಹಿಂದೆ ಮಾತುಕತೆ ನಡೆಸಿದ ದೇವೇಗೌಡರು, ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಯುದ್ದೋಪಾದಿಯಲ್ಲಿ ಹೋರಾಟ ಮಾಡಲು ಪಕ್ಷ ಸಿದ್ಧತೆ ನಡೆಸಿದೆ.
ಇಂತಹ ಸಂದರ್ಭದಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ತಲೆ ಕೆಡಿಸಿಕೊಳ್ಳದೇ ಪಕ್ಷ ನಿಷ್ಠೆ ಮೆರೆಯಬೇಕು ಎಂದು ದೇವೇಗೌಡರು ಏಕಕಾಲದಲ್ಲಿ ಮುಖಂಡರಿಗೆ ಕಿವಿಮಾತು ಮತ್ತು ಮನವಿ ಮಾಡಿಕೊಂಡು ಕಳುಹಿಸಿದರೆಂದು ಹೇಳಲಾಗಿದೆ.
ಜವರೇಗೌಡರಿಗೆ ಎಂಪಿ: ಪಕ್ಷದ ಅಧಿಕೃತ ಅಭ್ಯರ್ಥಿಗಳ ಪರ ಹಗಲಿರುಳು ಶ್ರಮಿಸಬೇಕು. ಶಾಸಕನಾಗಬೇಕು. ಮಂತ್ರಿಯಾಗಬೇಕು ಎಂದು ಆಸೆ ಪಡುವುದು ತಪ್ಪಲ್ಲ. ಆದರೆ ಪರಿಸ್ಥಿತಿಗೆ ಅನುಗುಣವಾಗಿ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಬೇಕು. ಒಂದು ವೇಳೆ ಬೇಲೂರು ಕ್ಷೇತ್ರದಿಂದ ರಾಜ್ಯಸಭೆ ಮಾಜಿ ಸದಸ್ಯ ಎಚ್.ಕೆ. ಜವರೇಗೌಡರಿಗೆ ಅನಿವಾರ್ಯ ಕಾರಣಗಳಿಂದ ಒಂದು ವೇಳೆ ಟಿಕೆಟ್ ನೀಡದಿದ್ದಲ್ಲಿ 2014 ರಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಅಖಾಡ ಇಳಿಸುವ ಇಚ್ಛೆಯನ್ನು ಗೌಡರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಈ ಬಾರಿ ಜೆಡಿಎಸ್ ಅನ್ನು ಮುಗಿಸಲು ಕೆಜೆಪಿಗೆ ಸುಪಾರಿ ನೀಡಿದೆ. ಈ ನಿಟ್ಟಿನಲ್ಲಿ ಕೆಲ ಕೆಜೆಪಿ ಮುಖಂಡರು ಹಿಂಬಾಗಿಲಿನ ಮೂಲಕ ಕೊಳಕು ರಾಜಕಾರಣ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement