ಕಲುಷಿತ ನೀರು ಸೇವನೆ 40 ಮಂದಿ ಅಸ್ವಸ್ಥ
ಕ.ಪ್ರ.ವಾರ್ತೆ ಹೊಳೆನರಸೀಪುರ ಏ.9
ಗ್ರಾಮ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿಯ ನಿರ್ಲಕ್ಷದಿಂದಾಗಿ ಕಲುಷಿತ ನೀರು ಸೇವಿಸಿದ ಪರಿಣಾಮ ಸುಮಾರು 40ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ತಾಲೂಕಿನ ಹಳ್ಳಿಮೈಸೂರು ಹೋಬಳಿಯಲ್ಲಿನ ದೊಡ್ಡಕಾಡನೂರು ಗ್ರಾಪಂ ವ್ಯಾಪ್ತಿಗೆ ಸೇರಿದ ಸಿ.ಹಿಂದಲಹಳ್ಳಿಯಲ್ಲಿ ಮಂಗಳವಾರ ನಡೆದಿದೆ.
ಇಷ್ಟೇ ಅಲ್ಲ, ಕಲುಷಿತ ನೀರು ಸೇವಿಸಿ ವಾಂತಿ ಭೇದಿಗೆ ಒಳಗಾಗಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಬೇಕಿದ್ದ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ.
ಅಸ್ವಸ್ಥಗೊಂಡವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗ್ರಾಮದಲ್ಲಿನ ಅಂಬೇಡ್ಕರ್ ಕಾಲೋನಿಗೆ ನೀರು ಸರಬರಾಜು ಮಾಡುವ ಕಿರು ನೀರು ಸರಬರಾಜು ಟ್ಯಾಂಕಿನ ಬಳಿಯಲ್ಲಿನ ನೀರಿನ ಪೈಪು ಚರಂಡಿ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಒಡೆದು ಹೋಗಿದ್ದು, ಈ ಕುರಿತಂತೆ ಗ್ರಾಮಸ್ಥರು ದೊಡ್ಡಕಾಡನೂರು ಗ್ರಾಪಂಗೆ ದೂರಿದ್ದರೂ ಕಳೆದ ಒಂದು ತಿಂಗಳಿಂದಲೂ ಒಡೆದ ಪೈಪನ್ನು ದುರಸ್ಥಿಗೊಳಿಸಿರಲಿಲ್ಲ. ಪಿಡಿಒ ಹಾಗೂ ಗ್ರಾಪಂ ಕಾರ್ಯದರ್ಶಿಯೂ ನಿರ್ಲಕ್ಷ ತೋರಿದ ಪರಿಣಾಮವಾಗಿ ಈ ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಅಲ್ಲದೇ ಗ್ರಾಮದಲ್ಲಿರುವ ಇನ್ನೆರಡು ಕಿರು ನೀರು ಸರಬರಾಜು ಟ್ಯಾಂಕ್ಗಳನ್ನೂ ಹಲವು ತಿಂಗಳಾದರೂ ಶುಚಿಗೊಳಿಸಿರಲಿಲ್ಲ. ಬೇಸಿಗೆ ದಿನದಲ್ಲಿ ಕುಡಿಯುವ ನೀರಿನ ಸ್ವಚ್ಛತೆಗೆ ಗಮನ ಹರಿಸದ ಕಾರಣದಿಂದಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಗ್ರಾಮದಲ್ಲಿನ ಕೆಲವು ಜನರಲ್ಲಿ ಸೋಮವಾರ ಸಂಜೆಯಿಂದಲೇ ವಾಂತಿ-ಭೇದಿ ಕಾಣಿಸಿತೊಡಗಿ ಕೂಡಲೇ ಅಸ್ವಸ್ಥರಾದವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿದೆ. ನಂತರ ಮಂಗಳವಾರವೂ ಮತ್ತಷ್ಟು ಜನರು ತೀವ್ರವಾಗಿ ಅಸ್ವಸ್ಥರಾದ ಪರಿಣಾಮ ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಲೋಕೇಶ, ಶಿವಣ್ಣ, ಉಮೇಶ್, ಪಂಕಜ ಮೊದಲಾದವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಸಾಗಿಸಲಾಗಿದೆ.
ಪರೀಕ್ಷೆ ಬರೆಯದ ವಿದ್ಯಾರ್ಥಿಗಳು: ತೀವ್ರ ವಾಂತಿ- ಭೇದಿಯಿಂದಾಗಿ ಮಂಗಳವಾರದಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಾದ ಕೃಷ್ಣಮೂರ್ತಿ, ಸುನೀಲ್ಕುಮಾರ್ ಹಾಗೂ ರವಿ ಎಂಬುವವರು ತೀವ್ರವಾಗಿ ಅಸ್ವಸ್ಥಗೊಂಡು ಪರೀಕ್ಷೆ ಬರೆಯುವಲ್ಲಿ ವಿಫಲರಾದರು. ಇದೇ ಗ್ರಾಮದ ಪುಟ್ಟಸ್ವಾಮಿ, ನಿಂಗರಾಜು, ಅಣ್ಣಯ್ಯ, ಜವಾಜಮ್ಮ, ಗೌರಮ್ಮ, ಜಾನಕಮ್ಮ, ನಂದಿನಿ, ಪುಟ್ಟಮ್ಮ, ವೆಂಕಟಮ್ಮ, ಕಳಸಯ್ಯ ಮೊದಲಾದವರು ಪಟ್ಟಣದ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದಲ್ಲಿ ಈ ಘಟನೆ ವರದಿಯಾಗುತ್ತಿದ್ದಂತೆಯೇ ದೊಡ್ಡಕಾಡನೂರು ಗ್ರಾಪಂ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಅಧಿಕಾರಿಗಳು ಬರುವಷ್ಟರಲ್ಲಿ ಗ್ರಾಮದಲ್ಲಿನ ಕುಡಿಯುವ ನೀರಿನ ಟ್ಯಾಂಕನ್ನು ಸ್ವಚ್ಛಗೊಳಿಸಿದ್ದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೇ ಡಿಎಚ್ಒ ಡಾ.ಶಾಮಲಾದೇವಿ, ತಾಲೂಕು ಆರೋಗ್ಯಾಧಿಕಾರಿ ಡಾ.ಎಚ್.ಎನ್.ರಾಜೇಶ್, ಡಿಎಸ್ಒ ರಾಜಗೋಪಾಲ್ ಅವರಲ್ಲದೇ ತಾಪಂ ಕಾರ್ಯನಿರ್ವಹಣಾಧಿಕಾರಿ ತಮ್ಮಣ್ಣಗೌಡ ಗ್ರಾಮಕ್ಕೆ ಭೇಟಿ ನೀಡಿ ಘಟನೆಗೆ ನಿಖರ ಕಾರಣ ಅರಿಯಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕುಡಿಯುವ ನೀರಿನ ಮಾದರಿಯನ್ನು ಪರೀಕ್ಷೆಗೂ ಕಳುಹಿಸಿರುವುದಾಗಿ ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಬೆಳಗಿನಿಂದಲೇ ತುರ್ತು ಚಿಕಿತ್ಸಾ ಕೇಂದ್ರವನ್ನು ದೊಡ್ಡಕಾಡನೂರು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಿದ್ದೇಗೌಡ ಅವರ ನೇತೃತ್ವದಲ್ಲಿ ತೆರೆಯಲಾಗಿದೆ. ಗ್ರಾಮದಲ್ಲಿನ ಪರಿಸ್ಥಿತಿಯಿಂದಾಗಿ ಗ್ರಾಪಂ ವತಿಯಿಂದ ಶುದ್ಧ ಕುಡಿಯುವ ನೀರನ್ನು ಟ್ಯಾಂಕರ್ಗಳಲ್ಲಿ ಗ್ರಾಮಕ್ಕೆ ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗಿದೆ. ವಾಂತಿ- ಭೇದಿಯಿಂದ ಅಸ್ವಸ್ಥರಾದವರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿರುವ ಕಾರಣದಿಂದಾಗಿ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿದ ಘಟನೆ ವರದಿಯಾಗಿಲ್ಲ.