ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೆಲಸ ಬಹಿಷ್ಕರಿಸಿ ಕಾರ್ಮಿಕರ ಪ್ರತಿಭಟನೆ

Rashmi Kasaragodu
Updated On : 10 Apr 2013, 12:18 pm

ಕನ್ನಡಪ್ರಭ ವಾರ್ತೆ   ಹಾಸನ   ಏ.9
ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮೈಸೂರು ಮಿನರ್ವ ಮಿಲ್ ಕಾರ್ಖಾನೆಯ ಕಾರ್ಮಿಕರು ಮಂಗಳವಾರ ಕೆಲಸ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಹೊರವಲಯದಲ್ಲಿರುವ ಕಾರ್ಖಾನೆಯ ಮುಂದೆ ಧರಣಿ ಕುಳಿತ ನೂರಾರು ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಕಾರ್ಮಿಕರಿಗೆ ನೀಡುತ್ತಿದ್ದ ಅಲ್ಪಮೊತ್ತದ ವೇತನವನ್ನು ಮತ್ತೆ ಕಡಿಮೆ ಮಾಡುವ ಮೂಲಕ ಕಾರ್ಮಿಕರಿಗೆ ಕಾರ್ಖಾನೆಯು ಸಮಾನ ವೇತನ ನೀಡುತ್ತಿಲ್ಲ. ಅಷ್ಟೇ ಅಲ್ಲದೆ ಕೆಲಸಕ್ಕೆ ತಕ್ಕ ವೇತನವನ್ನು ಕಾರ್ಖಾನೆಯು ನೀಡದೆ ಕಾರ್ಮಿಕರಿಂದ ದುಡಿಸಿಕೊಂಡು ವಂಚನೆ ಮಾಡುತ್ತಿದೆ. ಸಮಾನ ವೇತನ ನೀಡಬೇಕು ಎಂಬ ನಿಯಮವಿದ್ದರೂ ಹೆಚ್ಚು ಸಮಯ ದುಡಿಸಿಕೊಂಡು ಕಡಿಮೆ ವೇತನ ನೀಡುವ ಮೂಲಕ ಕಾರ್ಮಿಕರನ್ನು ಕೀಳು ಭಾವನೆಯಿಂದ ಕಾಣಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಾರಂಭದಲ್ಲಿ ಕಾರ್ಮಿಕರಿಗೆ ಮಾಸಿಕ 5 ಸಾವಿರ ವೇತನ ನೀಡುತ್ತಿದ್ದರು. ಆದರೆ ಇದ್ದಕ್ಕಿಂತದೆ ಯಾವುದೇ ಸೂಚನೆ ನೀಡದೆ ಎಲ್ಲಾ ಕಾರ್ಮಿಕರ ವೇತನವನ್ನು 5 ಸಾವಿರ ರಿಂದ 4500 ನೀಡುವ ಮೂಲಕ ಏಕಾಏಕಿ ಕಡಿತ ಮಾಡಲಾಗಿದೆ. ವೇತನವನ್ನು ಕಡಿಮೆ ಮಾಡಿದಂತೆ ಕಾರ್ಮಿಕರಿಂದ ತೆಗೆಸುವ ಕೆಲಸದ ಅವಧಿಯಲ್ಲಿ ಯಾವುದೇ ರೀತಿಯ ಕಡಿತವಾಗಿಲ್ಲ. ಮೊದಲಿನಂತೆ ಕಾರ್ಮಿಕರಿಂದ ಅಷ್ಟೇ ಕೆಲಸವನ್ನು ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈಡೇರದ ಕಾಯಂ ಭರವಸೆ: ಈ ಹಿಂದೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ಸಂದರ್ಭದಲ್ಲಿ 2 ವರ್ಷಗಳ ಅವಧಿ ಪೂರೈಸುವ ಕಾರ್ಮಿಕರನ್ನು ಕಾಯಂ ನೌಕರರನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಎಲ್ಲಾ ಕಾರ್ಮಿಕರಿಗೆ ಕಾರ್ಖಾನೆಯವರು ಭರವಸೆ ನೀಡಿದ್ದರು. ಆದರೆ ಕಾರ್ಮಿಕರು 2 ವರ್ಷಗಳ ಪೂರೈಸಿರುವುದಲ್ಲದೆ 3 ವರ್ಷಗಳನ್ನು ಪೂರೈಸುತ್ತಿದ್ದಾರೆ. ಇದುವರೆಗೂ ಕಾರ್ಮಿಕರನ್ನು ಕಾಯಂ ನೇಮಕಾತಿ ಮಾಡುವ ಯಾವುದೇ ರೀತಿಯ ಪ್ರಕ್ರಿಯೆಗಳು ಇದುವರೆಗೂ ನಡೆಯುತ್ತಿಲ್ಲ ಎಂದು ದೂರಿದರು.
ನೇಮಕಾತಿ ಸಂದರ್ಭದಲ್ಲಿ ಕಾರ್ಖಾನೆಯವರು ನೀಡಿದ ಭರವಸೆಗಳು ಸಂಪೂರ್ಣ ಸುಳ್ಳಾಗಿದ್ದು, ಕಾರ್ಮಿಕರಿಗೆ ಆಮೀಷ ಒಡ್ಡಿ ನಂತರ ಅದನ್ನು ಅಲ್ಲಗಳೆಯುವ ಪ್ರವೃತ್ತಿಯನ್ನು ಕಾರ್ಖಾನೆಯವರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನೇಮಕ ಮಾಡಿಕೊಂಡಿರುವಂತಹ ಇನ್ನೂ ಕೆಲ ಕಾರ್ಮಿಕರಿಗೆ ಜಾಬ್ ಕಾರ್ಡ್ಗಳು ಲಭ್ಯವಾಗಿಲ್ಲ. ಜಾಬ್ ಕಾರ್ಡ್ ನೀಡದಿದ್ದರೆ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳಿಂದ ವಂಚತರಾಗುತ್ತಾರೆ. ಜಾಬ್ ಕಾರ್ಡ್ ನೀಡುವಂತೆ ಕೇಳಿದರೂ ಸಹ ವಿನಾಕಾರಣ ನೀಡಿ ನೀಡುವುದಾಗಿ ಹೇಳಿ ಸುಮ್ಮನಾಗುತ್ತಿದ್ದಾರೆ. ಜಾಬ್ ಕಾರ್ಡ್ಗಳನ್ನು ಪಡೆಯುವುದು ಪ್ರತಿಯೊಬ್ಬ ಕಾರ್ಮಿಕರ ಹಕ್ಕಾಗಿದೆ. ಅದನ್ನೇ ಕಾರ್ಖಾನೆಯು ನೀಡದಿದ್ದರೆ ಕಾರ್ಮಿಕರಿಗೆ ಮೋಸ ಮಾಡಿದಂತಾಗಿದೆ ಎಂದು ದೂರಿದರು. ಕಾರ್ಮಿಕರು ತಮ್ಮ ಕುಂದು ಕೊರತೆಗಳ ಬಗ್ಗೆ ಕಾರ್ಖಾನೆಯ ಆಡಳಿತ ವಿಭಾಗದ ಗಮನಕ್ಕೆ ತಿಳಿಸಲು ಮುಂದಾದ ಸಂದರ್ಭದಲ್ಲಿ ಕಾರ್ಮಿಕರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಕಾರ್ಮಿಕರನ್ನು ಸಂಘಟಿತರನ್ನಾಗಿ ಮಾಡಲು ಮುಂದಾದ ಸಂದರ್ಭದಲ್ಲಿ ಅದಕ್ಕೆ ಕಾರ್ಖಾನೆಯವರು ಅಡ್ಡಿಪಡಿಸುತ್ತಾರೆ. ಕಾರ್ಮಿಕರ ಸಮಸ್ಯೆಗಳನ್ನು ನಿವಾರಿಸುವ ಬದಲಾಗಿ ಮತ್ತಷ್ಟು ಕಾರ್ಮಿಕರ ಸಮಸ್ಯೆಗಳನ್ನು ಕಾರ್ಖಾನೆಯಲ್ಲಿ ಉಲ್ಬಣಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾರ್ಮಿಕರ ಸಂಪೂರ್ಣ ನಿರ್ಲಕ್ಷ್ಯ: ಕಾರ್ಖಾನೆಯವರು ಪ್ರಾರಂಭದಲ್ಲಿ ನೀಡಿದ ಭರವಸೆಗಳು ಹಾಗೂ ನೀತಿ ನಿಯಮಗಳನ್ನು ಗಾಳಿಗೆ ತೂರಿ ಕಾರ್ಮಿಕರಿಂದ ಕೆಲಸ ಮಾಡಿಸುತ್ತಿದ್ದಾರೆ. ಈ ವಿರುದ್ಧ ಧ್ವನಿ ಎತ್ತಲು ಮುಂದಾದರೆ ಅದನ್ನು ಶಮನ ಮಾಡುವ ಪ್ರವೃತ್ತಿಯನ್ನು ಕಾರ್ಖಾನೆಯವರು ಬೆಳೆಸಿಕೊಂಡಿದ್ದಾರೆ. ಕಾರ್ಮಿಕರಿಗೆ ನಿರ್ಭೀತಿಯಿಂದ ಕೆಲಸ ಮಾಡುವ ವಾತಾವರಣ ಸಂಪೂರ್ಣವಾಗಿ ಕಾರ್ಖಾನೆಯಲ್ಲಿ ಕದಡಿದಂತಾಗಿದೆ. ಕನಿಷ್ಠ ವೇತನ ನೀಡದ ಕಾರ್ಖಾನೆ ಈಗ ಮತ್ತಷ್ಟು ವೇತನ ಕಡಿತಗೊಳಿಸುವ ಮೂಲಕ ಕಾರ್ಮಿಕರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮನೋಭಾವ ತೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದ್ದರಿಂದ ಕೂಡಲೇ ಅನ್ಯಾಯವಾಗಿರುವ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡಬೇಕು. ಸಮಾನ ಹಾಗೂ ಕನಿಷ್ಠ ವೇತನವನ್ನು ಕಾರ್ಮಿಕರಿಗೆ ನೀಡಬೇಕು ಮತ್ತು ಎಲ್ಲಾ ನೌಕರರನ್ನು ಕಾಯಂಗೊಳಿಸಬೇಕು ಎಂದು ಪಟ್ಟು ಹಿಡಿದರು. ಪ್ರತಿಭಟನೆಯಲ್ಲಿ ಮಂಜುನಾಥ್, ಪ್ರವೀಣ್ಕುಮಾರ್, ವಿಜಯ್, ಮೋಹನ್, ಸುರೇಶ್, ಕಿರಣ್ಕುಮಾರ್, ರಾಜು, ಸುಧಾಕರ್, ರಂಗೇಗೌಡ, ಪ್ರಕಾಶ್, ಪುನೀತ್, ರವಿ, ಸಾಗರ್, ಪುರುಷೋತ್ತಮ್, ಶ್ರೀಧರ್, ಮಧುಸೂದನ್, ಮಂಜೇಗೌಡ, ಸ್ವಾಮಿ, ಸಂತೋಷ್ಕುಮಾರ್, ರಾಜೇಶ್, ಕಾವ್ಯ, ರೂಪ, ಸವಿತಾ, ಕವಿತಾ, ಸೌಮ್ಯ, ಸುಮ, ರಶ್ಮಿ, ಅನ್ನಪೂರ್ಣ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement