ವಾರದಲ್ಲಿ ಅರ್ಧಗಂಟೆ ಮಾತ್ರ ನೀರು!
ಕನ್ನಡಪ್ರಭವಾರ್ತೆ ಆಲೂರು ಏ.9
ತಾಲೂಕಿನ ಜೀವನದಿ ಯಗಚಿಯಲ್ಲಿ ಕಳೆದ ಕೆಲ ದಿನಗಳಿಂದ ಹರಿವು ನಿಂತ ಪರಿಣಾಮ ಕುಡಿಯುವ ನೀರಿಗೆ ಪಟ್ಟಣದಲ್ಲಿ ತೀವ್ರ ತೊಂದರೆ ಉಂಟಾಗಿದೆ.
ಅಲ್ಲಿಂದ ನದಿಗೆ ಬಿಡಲಾಗುತ್ತಿರುವ ನೀರಿನ ಪ್ರಮಾಣ ಅತ್ಯಲ್ಪವಾಗಿದ್ದು, ಬೇಲೂರಿನಿಂದ ಆಲೂರಿನ ಹುಣಸುವಳ್ಳಿ ಬಳಿ ಇರುವ ಪಂಪ್ ಹೌಸ್ವರೆಗೆ ನೀರು ಬಾರದೆ ಪಂಪ್ಗಳಿಗೆ ನೀರೆತ್ತಲು ಸ್ಥಾಪಿಸಿರುವ ಮಡುವಿನಲ್ಲಿ ನೀರು ಪಾತಾಳಕ್ಕಿಳಿದಿದ್ದು, 3 ಪಂಪ್ಗಳ ಪೈಕಿ ಕೇವಲ ಒಂದೇ ಪಂಪ್ಗೆ ಮಾತ್ರ ನೀರೆಟಕುತ್ತಿದೆ. ಆದ್ದರಿಂದ ಪಟ್ಟಣದ 11 ವಾರ್ಡ್ಗಳಲ್ಲಿ ಇರುವ ಜನರಿಗೆ 5-6 ದಿನಗಳಿಗೊಮ್ಮೆ ಕೇವಲ ಅರ್ಧ ಗಂಟೆ ಮಾತ್ರ ನೀರು ಬಿಡಲಾಗುತ್ತಿದೆ.
ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಚುನಾಯಿತರಾದ 11 ಜನ ಅಭ್ಯರ್ಥಿಗಳು ವಿಧಾನಸಭೆ ಚುನಾವಣೆ ಹಿನ್ನೆಲೆಯಿಂದ ಅಧಿಕಾರ ಸ್ವೀಕರಿಸಲಾಗದೆ ಮನೆಯಲ್ಲಿದ್ದರೆ, ನಾಗರಿಕರು ತಾವು ಗೆಲ್ಲಿಸಿದರೂ ನೀರಿನ ಸಮಸ್ಯೆ ಬಗೆಹರಿಸಲಿಲ್ಲ ಎಂದು ಅವರಿಗೆ ಹಿಡಿಶಾಪ ಹಾಕುವಂತಾಗಿದೆ.
ವಾಸನೆ ಬರುತ್ತಿರುವ ನೀರು: ಯಗಚಿ ನದಿಯಲ್ಲಿ ಹರಿವು ನಿಂತ ಪರಿಣಾಮ ನದಿ ನೀರು ಸಂಪೂರ್ಣ ಮಲೀನಗೊಂಡಿದ್ದು, ನದಿಯಲ್ಲಿ ಇರುವ ಹಳ್ಳಗಳಲ್ಲಿ ನೀರು ನಿಂತು ಸಹಿಸಲು ಅಸಾಧ್ಯ ವಾಸನೆ ಬರುತ್ತಿದೆ. ನದಿಗೆ ಬೇಲೂರು ಪಟ್ಟಣದ ಯುಜಿಡಿಯಿಂದ ತ್ಯಾಜ್ಯ ವಸ್ತುಗಳನ್ನು ನೇರವಾಗಿ ಬಿಡಲಾಗುತ್ತಿದ್ದು, ಈ ನೀರು ನದಿ ನೀರಿನೊಂದಿಗೆ ಸೇರಿಕೊಂಡ ಪರಿಣಾಮ ನೀರು ಕಟ್ಟೆವಾಸನೆ ಬರುತ್ತಿದೆ. ಆಲೂರಿನ ಜನತೆ ವಿಧಿ ಇಲ್ಲದೆ ಇದೇ ನೀರನ್ನು ಕುಡಿಯಬೇಕಾದ ಪರಿಸ್ಥಿತಿ ಬಂದೊದಗಿದೆ.
ನದಿಯಲ್ಲಿ ಮೃತಪಟ್ಟ ಪ್ರಾಣಿಗಳ ದೇಹ ಹಾಗೂ ಮಾಂಸದಂಗಡಿಯವರು ತ್ಯಾಜ್ಯಗಳನ್ನು ತಂದು ಇಲ್ಲಿಯೇ ಹಾಕುತ್ತಿದ್ದಾರೆ. ಇದರಿಂದಾಗಿ ಇದೇನು ನದಿಯೇ ಅಥವಾ ಚಿಕ್ಕ ತೊರೆಯೋ ಎಂಬ ಪ್ರಶ್ನೆ ಮೂಡುತ್ತಿದೆ.
ಕಲುಷಿತಗೊಂಡ ನೀರಿನಲ್ಲಿ ಆಮ್ಲಜನಕ ಕಡಿಮೆಯಾಗಿ ಮೀನುಗಳು ಸಾವಿಗೀಡಾಗುತ್ತಿವೆ. ಯಗಚಿ ಜಲಾಶಯದಲ್ಲಿ ನೀರಿದ್ದಾಗ ತಮಿಳುನಾಡಿಗೆ ಬಿಡುವ ದೃಷ್ಟಿಯಿಂದ ರಾತ್ರೋ ರಾತ್ರಿ ಹೇಮಾವತಿ ಜಲಾಶಯಕ್ಕೆ ಹರಿಸಿದ್ದೇ ಇದಕ್ಕೆಲ್ಲಾ ಕಾರಣವಾಗಿದೆ. ಕಳೆದ ವರ್ಷ ಮಳೆ ಚೆನ್ನಾಗಿ ಬಿದ್ದ ಪರಿಣಾಮ ಕುಡಿಯುವ ನೀರಿಗೆ ತೊಂದರೆ ಉಂಟಾಗಲಿಲ್ಲ. ಆದರೆ ಈ ಬಾರಿ ಮಳೆ ಬಂದಿದ್ದೇ ಕಡಿಮೆ.
ಜಲಾಶಯಗಳಲ್ಲಿ ಸಂಗ್ರಹವಾಗಿದ್ದ ನೀರು ಬೇಸಿಗೆ ಕಾಲಕ್ಕೆ ಬೇಕಾಗಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಈ ಬಾರಿ ಜಲಾಶಯಗಳು ಬರಿದಾಗಿ ಪಕ್ಕದ ತಮಿಳುನಾಡಿನ ಜನತೆಗೆ ಅನುಕೂಲವಾಯಿತು.
ಇನ್ನುಳಿದಂತೆ ನದಿಗಳ ಒಡಲನ್ನು ಬಗೆದು ನಡೆಸಲಾಗುತ್ತಿರುವ ಅಕ್ರಮ ಮರಳುಗಾರಿಕೆ ಹಾಗೂ ನದಿ ಪಾತ್ರಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತಿರುವ ಶುಂಠಿ ಬೆಳೆ, ಯಗಚಿ ನದಿಯಲ್ಲಿ ಮರಳು ದಂಧೆ ಅಷ್ಟಾಗಿ ನಡೆಯದಿದ್ದರೂ ಶುಂಠಿ ಬೆಳೆಗಾಗಿ ನದಿಗಳಿಗೆ ಸಬ್ ಮರ್ಸಿಬಲ್ ಪಂಪ್ಸೆಟ್ಗಳನ್ನು ಅಳವಡಿಸಿ ಹರಿವ ನೀರನ್ನು ತಡೆಯಲು ದೊಡ್ಡ ದೊಡ್ಡ ತಡೆಗೋಡೆಗಳನ್ನು ನಿರ್ಮಿಸಿರುವುದು ಹರಿವು ನಿಲ್ಲಲು ಕಾರಣವಾಗುತ್ತಿದೆ.
ಎರಡೂ ಬದಿಗೆ ಶುಂಠಿ: ಶುಂಠಿ ಬೆಳೆಗೆ ಅಪಾರ ಪ್ರಮಾಣದ ನೀರು ಬೇಕಾಗಿದ್ದು, ತಾಲೂಕಿನಲ್ಲಿ ಹರಿವ ಯಗಚಿ ನದಿಯ ಎರಡು ಬದಿಗಳಲ್ಲೂ ವ್ಯಾಪಕವಾಗಿ ಶುಂಠಿ ಬೆಳೆಯಲಾಗಿದೆ. ಇದಕ್ಕೆ ಅಪಾರ ಪ್ರಮಾಣದ ನೀರು ಬೇಕಾಗಿದ್ದು, ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಪಂಪ್ ಸೆಟ್ಗಳಲ್ಲಿ ನೀರು ಬಾರದ ಪರಿಣಾಮ ಹಣವುಳ್ಳವರು ನದಿಯ ಎರಡು ಬದಿಗಳಲ್ಲಿ ನೂರಾರು ಹೆಕ್ಟೇರ್ ಒಂದು ಎಕರೆಗೆ ಒಂದು ಬೆಳೆ ಬೆಳೆಯಲು 30 ರಿಂದ 40 ಸಾವಿರದವರೆಗೂ ಹಣ ನೀಡುತ್ತಿದ್ದಾರೆ.
ಇದರ ಆಸೆಗೆ ಬಿದ್ದ ಬಡ ರೈತರು ಶುಂಠಿ ಬೆಳೆದು ಲಾಭ ಮಾಡಿಕೊಳ್ಳಲು ಬೇರೆಯವರಿಗೆ ಭೂಮಿ ನೀಡಿ ತಮ್ಮ ಜಮೀನನ್ನು ಬಂಜರು ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಶೀಘ್ರ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ನದಿಗೆ ಅಡ್ಡಲಾಗಿ ಹಾಕಿರುವ ತಡೆಗೋಡೆಗಳನ್ನು ತೆರವುಗೊಳಿಸುವುದರ ಜತೆಗೆ ಬೇಲೂರು ಪಟ್ಟಣದ ಯುಜಿಡಿ ತ್ಯಾಜ್ಯವನ್ನು ನೇರವಾಗಿ ನದಿಗೆ ಬಿಡುವುದನ್ನು ತಪ್ಪಿಸಬೇಕಿದೆ.