ಸಭೆಗೆ ಅನುಮತಿ ಕಡ್ಡಾಯ
ಕ.ಪ್ರ. ವಾರ್ತೆ ಚನ್ನರಾಯಪಟ್ಟಣ ಏ.9
ಚುನಾವಣಾ ನೀತಿ ಸಂಹಿತೆಯಡಿಯಲ್ಲಿ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಲಾಗಿದ್ದು ಮುಂದಿನ ದಿನಗಳಲ್ಲಿ ಚುನಾವಣೆ ವಿಧಿ ವಿಧಾನಗಳನ್ನು ಪಾಲಿಸದಿದ್ದರೆ ಯಾವುದಕ್ಕೂ ಮಣಿಯದೆ ದೂರು ದಾಖಲಿಸಲಾಗುವುದು ಎಂದು ತಹಸೀಲ್ದಾರ್ ನಟರಾಜ್ ತಿಳಿಸಿದರು.
ತಾಲೂಕು ಕಚೇರಿಯಲ್ಲಿ ರಾಜಕೀಯ ಪಕ್ಷಗಳ ನಾಯಕರು ಹಾಗೂ ಚುನಾವಣೆಗೆ ನಿಯೋಜಿಸಲಾಗಿರುವ ವಿವಿಧ ತಂಡಗಳ ಸಭೆಯಲ್ಲಿ ಮಾತನಾಡಿ ಚುನಾವಣಾ ಸಂಬಂಧ ಯಾವುದೇ ಪಕ್ಷಗಳು ಒಪ್ಪಿಗೆ ಪಡೆಯದೆ ಕಾರ್ಯ ಮಾಡಿದರೆ ದೂರು ದಾಖಲಿಸುತ್ತಿದ್ದು, ತಾವು ಸ್ವತಂತ್ರ ಅಭ್ಯರ್ಥಿ ಎಂದು ಘೋಷಿಸಿಕೊಂಡಿರುವ ಅರ್ಜುನ್ಕುಮಾರ್ ಭಿತ್ತಿ ಪತ್ರಗಳನ್ನು ಅಂಟಿಸಿರುವುದು ಹಾಗೂ ತಾಲೂಕಿನ ಶ್ರವಣಬೆಳಗೊಳ ಹೋಬಳಿ ಆಲದಹಳ್ಳಿಯಲ್ಲಿ ಬೋರ್ವೆಲ್ ಕೊರೆದಿರುವುದರ ವಿರುದ್ಧ ಲಾರಿ ಮಾಲೀಕನ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ತಿಳಿಸಿದರು.
ರೆಕಾರ್ಡ್ ಕಡ್ಡಾಯ: ರಾಜಕೀಯ ಪಕ್ಷಗಳು ಯಾವುದೇ ಸಭೆ ಸಮಾರಂಭ ಏರ್ಪಡಿಸಿದರೂ ಅದನ್ನು ವಿಡಿಯೋ ರೆಕಾರ್ಡ್ ಕಡ್ಡಾಯವಾಗಿದ್ದು, ಅದಕ್ಕಾಗಿಯೇ ಚುನಾವಣಾ ಆಯೋಗ ತಂಡ ರಚನೆಯಾಗಿದೆ. ಅಭ್ಯರ್ಥಿಗಳು ಪ್ರತಿ ದಿನ ಸಂಜೆ 5ರೊಳಗೆ ತಾವು ಮಾಡಿರುವ ಖರ್ಚಿನ ವಿವರ ನೀಡಬೇಕು ಎಂದು ತಿಳಿಸಿದರು. ಏ.10ರಿಂದ 17ರವರಗೆ ಭಾನುವಾರ ಹೊರತುಪಡಿಸಿ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಕಚೇರಿಯೊಳಗೆ ಕೇವಲ 5ಮಂದಿಗೆ ಮಾತ್ರ ಅವಕಾಶವಿದೆ ಎಂದು ತಿಳಿಸಿದರು. ಚುನಾವಣೆ ಸಂಬಂಧ ಯಾವುದೇ ಅಕ್ರಮಗಳು ನಡೆದರೆ ಅಥವಾ ಯಾವುದಾದರೂ ವ್ಯಕ್ತಿಗಳು ಆಮಿಷ ಒಡ್ಡಿ ಮತದಾರರನ್ನು ತಮ್ಮತ್ತ ಸೆಳೆದರೆ ಕ್ಷೇತ್ರದ ಚುನಾವಣಾಧಿಕಾರಿಗಳಾಗಿ ನಿಯೋಜನೆಗೊಂಡಿರುವ ಡಾ.ಸುರೇಶ್ ಅವರಿಗೆ ಲಿಖಿತವಾಗಿ ಅಥವಾ 9342521148ಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು. ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಡಾ.ಸುರೇಶ್ ಇದ್ದರು.