ಡಮ್ಮಿ ಅಭ್ಯರ್ಥಿನಾನಲ್ಲ: ಮಲ್ಲೇಶ್
ಸಕಲೇಶಪುರ: ಡಮ್ಮಿ ಅಭ್ಯರ್ಥಿ ನಾನಲ್ಲ. ಈ ಚುನಾವಣೆಯಲ್ಲಿ ಗೆಲುವು ನನ್ನದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಮಲ್ಲೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಮ್ಮಿ ಅಭ್ಯರ್ಥಿಯನ್ನು ಚುನಾವಣೆ ಅಖಾಡಕ್ಕಿಳಿಸುವ ಕೆಟ್ಟ ಸಂಸ್ಕೃತಿ ಕಾಂಗ್ರೆಸ್ಗೆ ಬಂದಿಲ್ಲ. ನಮ್ಮ ಸಾಮರ್ಥ್ಯದ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದರೆ ಇದು ಕಾಂಗ್ರೆಸ್ ಕಾರ್ಯಕರ್ತರಿಗೆ ಮಾಡಿದ ಅವಮಾನವಾಗಿದೆ. ಚುನಾವಣೆಯ ಫಲಿತಾಂಶದ ನಂತರ ಯಾರು ಡಮ್ಮಿ ಅಭ್ಯರ್ಥಿ ಎಂಬುದು ತಿಳಿಯಲಿದೆ ಎಂದರು.
ಬಿಜೆಪಿ ಹಾಗೂ ಜೆಡಿಎಸ್ ಆಡಳಿತ ಕಂಡಿರುವ ಜನರು ಸ್ವಜನಪಕ್ಷಪಾತ, ಭ್ರಷ್ಟಾಚಾರದಿಂದ ಬೇಸತ್ತಿದ್ದು ಬದಲಾವಣೆಗಾಗಿ ಹಾತೊರೆಯುತ್ತಿದ್ದಾರೆ. ಪ್ರಚಾರ ನಡೆಸಲು ಹೋದೆಡೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ನಾಯಕರ ನಡುವಿನ ವೈಮನಸ್ಸು ಇನ್ನೆರಡು ದಿನಗಳಲ್ಲಿ ಬಗೆಹರಿಯಲಿದೆ ಎಂದರು.