ನೀತಿ ಸಂಹಿತೆ ಕುರಿತು ಸಾರ್ವಜನಿಕರ ಸಭೆ
ಸಕಲೇಶಪುರ: ಚುನಾವಣೆ ಅಕ್ರಮ ನಡೆಸುವವರ ವಿರುದ್ಧ ಚುನಾವಣೆ ಆಯೋಗ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದು ಚುನಾವಣಾಧಿಕಾರಿ ಶ್ರೀವಿದ್ಯಾ ಹೇಳಿದ್ದಾರೆ. ಮಂಗಳವಾರ ಪಟ್ಟಣದ ಮಿನಿವಿಧಾನ ಸೌಧದಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಎಲ್ಲಾ ಚುನಾವಣೆಗಿಂತ ಈ ಬಾರಿ ಹೆಚ್ಚಿನ ಚುನಾವಣಾ ವೀಕ್ಷಕರನ್ನು ನೇಮಿಸಲಾಗಿದ್ದು ಅಭ್ಯರ್ಥಿ ಖರ್ಚು ಮಾಡುವ ಪ್ರತಿ ವೆಚ್ಚಕ್ಕೂ ಲೆಕ್ಕ ಕೊಡಬೇಕು ಎಂದರು. ಆಯೋಗದ ಅನುಮತಿ ಪಡೆಯದೆ ಸಭೆ ಸಮಾರಂಭ ನಡೆಸುವುದು ಹಾಗೂ ಮತದಾರರ ಒಲಿಸಿಕೊಳ್ಳಲು ಆಮಿಷ ಒಡ್ಡುವುದು ಕಂಡು ಬಂದಲ್ಲಿ ಆಯೋಗ ದೂರು ದಾಖಲಿಸಿ ಕೊಳ್ಳಲಿದೆ ಎಂದು ತಿಳಿಸಿದರು. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸುವುದು ಸಂಬಂಧಪಟ್ಟ ಪಕ್ಷದ ನಾಯಕರ ಹಾಗೂ ಅಭ್ಯರ್ಥಿಗಳ ಕರ್ತವ್ಯವಾಗಿದೆ ಎಂದರು. ತಹಸೀಲ್ದಾರ್ಬಾಬು ದೇವಾಡಿಗ, ಉಪತಹಸೀಲ್ದಾರ್ ಮಂಜುನಾಥ್ ಇತರರು ಇದ್ದರು.