ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬೆಲೆ ಏರಿಕೆಗೆ ಹಿಂದು- ಮುಂದು ನೋಡದ ಜನ!

Mainashree
Updated On : 11 Apr 2013, 12:48 pm

ಹೊಳೆನರಸೀಪುರ: ಬೇವು-ಬೆಲ್ಲವ ತಿಂದು ಸುಖ, ದುಃಖಗಳ ಸಮನ್ವಯತೆ ಸಾರುತ್ತಾ, ಎಲ್ಲರ ಸಂಭ್ರಮವನ್ನು ಇಮ್ಮಡಿಸಿ ಹೊಸ ಚಿಗುರು-ಹಳೆ ಬೇರುಗಳ ಭಾವ ಬಂಧನದ ಸಂಕೇತವಾಗಿ, ಕನ್ನಡಿಗರ ನಿಜ ಅರ್ಥದ ಹೊಸ ವರ್ಷಾಚರಣೆಯಾದ ಯುಗಾದಿ ಹಬ್ಬ ಆಚರಿಸಲು ಮುನ್ನಾ ದಿನ ಬುಧವಾರ ಜನರು ಅಗತ್ಯ ವಸ್ತುಗಳನ್ನು ಕೊಳ್ಳಲು ಮುಂದಾದರು.
ಬಿರು ಬಿಸಿಲಿನ ತಾಪದ ನಡುವೆಯೇ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದ್ದರೂ ಜನ ಹಿಂದೆ ಮುಂದೆ ನೋಡದೆ ಯುಗಾದಿಯನ್ನು ಸಂಭ್ರಮದಿಂದ ಆಚರಿಸಲು ತುದಿಗಾಲಿನಲ್ಲಿ ನಿಂತಿದ್ದ ದೃಶ್ಯ ಕಂಡುಬಂತು.
 ಸತತ ಬರದ ನಡುವೆಯೂ ತಾಲೂಕಿನ ಗ್ರಾಮೀಣ ಭಾಗದಿಂದಲೂ ಜನರು ಅಗತ್ಯ ವಸ್ತುಗಳಾದ ಹೂವು, ಹಣ್ಣು, ದಿನಸಿ, ಹೊಸ ಬಟ್ಟೆಗಳನ್ನು ಕೊಳ್ಳಲು ಪಟ್ಟಣಕ್ಕೆ ಆಗಮಿಸಿದ್ದ ಕಾರಣದಿಂದಾಗಿ ಪಟ್ಟಣದ ಮುಖ್ಯ ಬೀದಿಗಳು ಜನರಿಂದ ತುಂಬಿ ತುಳುಕುತ್ತಿತ್ತು. ಈ ಬಾರಿ ಪ್ರಮುಖವಾಗಿ ಹೂವು ಹಣ್ಣುಗಳ ಬೆಲೆಯಂತೂ ತುಸು ಹೆಚ್ಚಾಗಿಯೇ ಇತ್ತು. ಇದರೊಂದಿಗೆ ಇಲ್ಲಿನ ಮಾರುಕಟ್ಟೆಯಲ್ಲಿ ಎಲ್ಲ ತರಕಾರಿ ಬೆಲೆಗಳೂ ದುಬಾರಿಯಾಗಿತ್ತು. ಇಲ್ಲಿನ ತರಕಾರಿ ಮಾರುಕಟ್ಟೆಯಲ್ಲದೇ ಪಟ್ಟಣದ ಪ್ರಮುಖ ವೃತ್ತಗಳಾದ ಸುಭಾಷ್‌ಚೌಕ, ಗಾಂಧಿ ವೃತ್ತ, ಪೇಟೆ ಮುಖ್ಯ ರಸ್ತೆಗಳು ಜನ ಜಂಗುಳಿಯಿಂದ ಕಾಲಿಡಲೂ ಆಗದ ಸ್ಥಿತಿ ನಿರ್ಮಾಣವಾಗಿತ್ತು. ಸುಭಾಷ್ ವೃತ್ತದಿಂದ ಪೇಟೆ ಮುಖ್ಯ ರಸ್ತೆಯಲ್ಲಿ ಹಣ್ಣು, ಹೂವು ತರಕಾರಿ ಮಾರಲು ವ್ಯಾಪಾರಿಗಳು ರಸ್ತೆಯನ್ನೇ ಮಾರುಕಟ್ಟೆಯನ್ನಾಗಿಸಿದ್ದರು.
ತಾಲೂಕಿನ ಹಲವು ಭಾಗಗಳಲ್ಲಿ ಬೆಳೆಯಲಾಗಿದ್ದ ಹೂವುಗಳನ್ನು ಹೆಚ್ಚಾಗಿ ಹೊರ ಊರುಗಳಿಗೆ ಹೆಚ್ಚಿನ ದರಕ್ಕಾಗಿ ಮಾರಲು ರೈತರೇ ಕೊಂಡೊಯ್ದ ಪರಿಣಾಮವಾಗಿ ಹೂವಿನ ಬೆಲೆಯು ಗಗನಕ್ಕೇರಿತ್ತು.  ಅಲ್ಲದೇ ತರಕಾರಿಗಳ ಬೆಲೆಯೂ 50 ರು.ಗೆ ಕಡಿಮೆ ಇಲ್ಲದಂತೆ ಮಾರಾಟವಾಗುತ್ತಿತ್ತು. ಆದಾಗ್ಯೂ ಜನತೆ ತಲೆ ಕೆಡಿಸಿಕೊಳ್ಳದೇ ಅಗತ್ಯ ವಸ್ತು ಕೊಳ್ಳಲು ಮುಂದಾದ ದೃಶ್ಯ ಕಂಡು ಬಂತು.  ಇನ್ನು ಪಟ್ಟಣದ ಎಲ್ಲಾ ಬಟ್ಟೆ ಅಂಗಡಿಗಳಲ್ಲೂ ಹೊಸ ಬಟ್ಟೆಗಳನ್ನು ಕೊಳ್ಳಲು ಗ್ರಾಹಕರು ಮುಗಿಬಿದ್ದಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಗತ್ಯ ವಸ್ತುಗಳ ಜೊತೆಗೆ ಜನರು ಮಾವು-ಬೇವಿನ ಕಟ್ಟನ್ನು ಮಾರುಕಟ್ಟೆಯಿಂದ ಮರೆಯದೇ ಕೊಂಡೊಯ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement