ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸುದ್ದಿ ಸಂಕ್ಷೇಪ

Mainashree
Updated On : 11 Apr 2013, 12:50 pm

ಮತದಾರರಿಗೆ ಪ್ರತಿಜ್ಞಾ ವಿಧಿ
ಹಾಸನ: ಚುನಾವಣಾ ಆಯೋಗದ ಸೂಚನೆ ಮೇರೆಗೆ ಜಿಲ್ಲೆಯ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳ ಮೂಲಕ ಪೋಷಕರಿಗೆ ಮತದಾರರ ಪ್ರತಿಜ್ಞಾ ವಿಧಿ ಪತ್ರ ರವಾನಿಸಿ  ಮೇ 5ರಂದು ನಡೆಯುವ ಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗದೆ ಸ್ವಯಂಪ್ರೇರಣೆಯಿಂದ ಮತ ಚಲಾಯಿಸುವುದಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸುವ ಪ್ರಯತ್ನ ಮಾಡಲಾಗುತ್ತಿದೆ.
 ಶಾಲಾ ಮಕ್ಕಳ ಮೂಲಕ ಕರಪತ್ರವನ್ನು ಅವರ ಮನೆಗಳಿಗೆ ತಲುಪಿಸಿ ಮೇ 5ರಂದು ನಡೆಯುವ ಮತದಾನದಲ್ಲಿ ಮತ ಚಲಾಯಿಸುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸುವ ಪತ್ರಕ್ಕೆ ತಂದೆ,ತಾಯಿ ,ಪೋಷಕರ ಸಹಿ ಪಡೆಯಲಾಗುತ್ತಿದೆ.
  ಬಹುತೇಕ ಎಲ್ಲಾ ಶಾಲೆಗಳಿಗೆ ಮತದಾರರ ಜಾಗೃತಿ ಪ್ರತಿಜ್ಞಾವಿಧಿ ರವಾನಿಸಲಾಗಿದ್ದು, ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯ ಮತ್ತು ಮುಕ್ತ ನ್ಯಾಯ ಸಮ್ಮತ ಹಾಗೂ ಶಾಂತಿಯುತ ಚುನಾವಣೆ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯನ್ನು ನಿರ್ಭೀತರಾಗಿ ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇವೆ ಎಂಬ ವಾಕ್ಯಗಳಿರುವ ಕರಪತ್ರವನ್ನು ವಿದ್ಯಾರ್ಥಿಗಳ ಮೂಲಕ ಕಳುಹಿಸಿ ಅವರ ತಂದೆ ತಾಯಿ, ಪೋಷಕರಿಂದ ಸಹಿ ಹಾಕಿಸಿ ವಾಪಸ್ ಪಡೆಯಲಾಗುವುದು.
  ಪ್ರತಿಜ್ಞಾ ವಿಧಿ ಕರಪತ್ರಗಳು ಇನ್ನು ತಲುಪಿರದ ಶಾಲೆಗಳಲ್ಲಿ ಮುಂದಿನ ದಿನಗಳಲ್ಲಿ ಶಾಲೆಗೆ ಕಳುಹಿಸಿ ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಿ ಪೋಷಕರ ಸಹಿ ಪಡೆಯಲಾಗುವುದು.
ಬೇಲೂರಲ್ಲಿ ಸ್ಪರ್ಧೆಇಲ್ಲ: ರೈತ ಸಂಘ
ಬೇಲೂರು: ಮೇ 5 ರಂದು ನಡೆಯಲಿರುವ 2013 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೇಲೂರು ವಿಧಾನಸಭಾ ಕ್ಷೇತ್ರದಿಂದ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ತಾಲೂಕು  ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಎ.ಎ.ಪರಮೇಶ್ ತಿಳಿಸಿದ್ದಾರೆ.
  ಪತ್ರಿಕಾ ಹೇಳಿಕೆ ನೀಡಿರುವ ಅವರು ವಿಧಾನಸಭಾ ಚುನಾವಣೆ ಭ್ರಷ್ಟ ವ್ಯವಸ್ಥೆಯಲ್ಲಿ ನಡೆಯುತ್ತಿರುವುದರಿಂದ ಸಂಘ ಕಾರ್ಯಕಾರಿ ಮಂಡಳಿಯಲ್ಲಿ ತೀರ್ಮಾನ ಕೈಗೊಂಡು ಈ ಕ್ಷೇತ್ರದಿಂದ ಸ್ಪರ್ಧಿಸದಿರಲು ತೀರ್ಮಾನಿಸಲಾಯಿತು ಎಂದಿದ್ದಾರೆ. ರೈತ ಸಂಘದ ಕಾರ್ಯಕರ್ತರು ಯಾವುದೇ ರಾಜಕೀಯ ಪಕ್ಷಗಳ ಜೊತೆ ಚುನಾವಣಾ ಪ್ರಚಾರಕ್ಕೆ ಹೋಗಬಾರದು  ಹಾಗೂ ಉತ್ತಮ ಅಭ್ಯರ್ಥಿಯನ್ನು ಗುರುತಿಸಿ ಮತ ಚಲಾಯಿಸಲುಮನವಿ ಮಾಡಿದ್ದಾರೆ.
ಭುಜೇಂದ್ರ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ
ಹಾಸನ: ಬೇಲೂರು ವಿಧಾನಸಭಾ ಕ್ಷೇತ್ರದಿಂದ  ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಭುಜೇಂದ್ರ ಅವರನ್ನು ಹಾಗೂ ಹೊಳೆನರಸೀಪುರ ಕ್ಷೇತ್ರದಿಂದ ಜಿ.ಎಸ್.ಮುರುಳೀಧರ್ ಅವರನ್ನು ಕಣಕ್ಕಿಳಿಸಲು ಪಕ್ಷದ ಸಂಸ್ಥಾಪಕ ಅಧ್ಯಕ್ಷ ಶ್ರೀರಾಮುಲು ಬೆಂಗಳೂರಿನಲ್ಲಿ ನಿರ್ಧರಿಸಿದ್ದಾರೆ ಎಂದು ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಗಂಜಲಗೂಡು ಗೋಪಾಲಗೌಡ ಹೇಳಿದ್ದಾರೆ.
 ಭುಜೇಂದ್ರ ಅವರು ವೀರಶೈವ ಸಮುದಾಯಕ್ಕೆ ಸೇರಿದ್ದು, ಅವರಿಗೆ ಪಕ್ಷದಲ್ಲಿ ಟಿಕೆಟ್ ಕೊಟ್ಟ ಸಂದರ್ಭದಲ್ಲಿ ಎಲ್ಲ ಸಮುದಾಯದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೆಲ್ಲುವ ಸಾಧ್ಯತೆ ಹೆಚ್ಚು ಕಂಡುಬಂದಿರುವುದರಿಂದ ಪಕ್ಷದ ವರಿಷ್ಠರೆಲ್ಲರೂ ತೀರ್ಮಾನಿಸಿರುವುದಾಗಿ ಹೇಳಿದ್ದಾರೆ.
 ಜಿ.ಎಸ್. ಮುರಳೀಧರ್  ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, 53ಸಾವಿರ ಒಕ್ಕಲಿಗ ಮತದಾರರು ಇದ್ದಾರೆ. 30 ಸಾವಿರ ದಾಸ ಒಕ್ಕಲಿಗ, 23 ಸಾವಿರ ಮುಳ್ಳು ಒಕ್ಕಲಿಗರು ಇದ್ದಾರೆ. ಮುರುಳೀಧರ  ದಾಸ ಒಕ್ಕಲಿಗ ಸಮುದಾಯದವರು.  ತಾಲೂಕಿನಲ್ಲಿ ಎಸ್ಸಿ, ಎಸ್ಟಿ ಮತದಾರರು 45 ಸಾವಿರ ಮತದಾರರು ಇದ್ದು, ಇದರಲ್ಲಿ ನಾಯಕ ಸಮುದಾಯದವರು 10 ಸಾವಿರ ಮತದಾರರು ಇದ್ದಾರೆ. ಇದರಿಂದಾಗಿ ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಿದರೆ ಎಲ್ಲ ಸಮುದಾಯದ ನಾಯಕರನ್ನು ಒಗ್ಗೂಡಿಸಿಕೊಂಡು ಎದುರಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement