ಉರ್ದು ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ
ಕ.ಪ್ರ. ವಾರ್ತೆ, ಹಾಸನ, ಏ.12
ನಗರದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನ ಉರ್ದು ವಿಭಾಗದಲ್ಲಿ 3ನೇ ಸೆಮಿಸ್ಟರ್‌ನಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಜೆ.ಶೈಲಜಕುಮಾರಿ ಮಾತನಾಡಿ, ಹಿಂದಿ, ಉರ್ದು ಭಾಷೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಅವುಗಳು ಕೇಳಲು ಮತ್ತು ಮಾತನಾಡಲು ಸವಿಯಾಗಿರುತ್ತವೆ. ರಾಷ್ಟ್ರ ಭಾಷೆಯಾದ ಹಿಂದಿ ದಕ್ಷಿಣ ಭಾರತದಲ್ಲಿ ಅಷ್ಟಾಗಿ ಬಳಕೆಯಲ್ಲಿ ಇಲ್ಲ, ಇನ್ನು ಉರ್ದು ಒಂದು ಜನಾಂಗೀಯ ಭಾಷೆಯಾಗಿ ಮಾತ್ರ ಬಳಕೆಯಾಗುತ್ತಿದೆ ಎಂದು ವಿಷಾದಿಸಿದರು.
ವಿದ್ಯಾರ್ಥಿನಿಯರು ಬೇರೆ ಬೇರೆ ಭಾಷೆ ಕಲಿಯುವ ಬಗ್ಗೆಯೂ ಆಸಕ್ತಿ ವಹಿಸಬೇಕು. ಮತ್ತು ಅವುಗಳಲ್ಲಿ ಲೇಖನ ಮತ್ತು ಸಣ್ಣ ಕತೆಗಳನ್ನು ಬರೆಯುವ ಮೂಲಕ ಭಾಷೆಯನ್ನು ಪ್ರೋತ್ಸಾಹಿಸಬೇಕೆಂದು ಕಿವಿಮಾತು ಹೇಳಿದರು.
ಉರ್ದು ಭಾಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಬಹುಮಾನ ನೀಡಿ, ಅಭಿನಂದಿಸಿದರು. ಸೈಯದ್ ಆಯೆಷಾ ಅಂಜುಂ ಪ್ರಾರ್ಥಿಸಿದರು. ಉರ್ದು ವಿಭಾಗ ಮುಖ್ಯಸ್ಥ ಯಾಸ್ಮಿನ್‌ಬಾನು ನಿರೂಪಿಸಿದರು. ರುಕ್ಸರ್‌ನಾಸಿರ್ ಸ್ವಾಗತಿಸಿದರು. ನೂರ್‌ಫಾತಿಮ ವಂದಿಸಿದರು.