ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಡವಿನಹೊಸಹಳ್ಳಿಯಲ್ಲಿ ರಾಮೇಶ್ವರ ಸ್ವಾಮಿ ಕರಗ ಉತ್ಸವ

Vishwanath S
Updated On : 12 Apr 2013, 10:21 am

ಕನ್ನಡಪ್ರಭ ವಾರ್ತೆ , ಹೊಳೆನರಸೀಪುರ , ಏ.12
 ಸಂಪ್ರದಾಯಬದ್ಧವಾಗಿ ಸುತ್ತಮುತ್ತಲಿನ ಗ್ರಾಮಗಳ ಜನರು ಸೌಹಾರ್ದತೆಯಿಂದ ಜತೆಗೂಡಿ ಸಂಭ್ರಮದಿಂದ ಆಚರಿಸುವ ಶ್ರೀ ರಾಮೇಶ್ವರ ಸ್ವಾಮಿ ಕರಗ(ಬಿಂದಿಗೆ ಜಾತ್ರೆ) ಉತ್ಸವ ಯುಗಾದಿ ದಿನವಾದ ಗುರುವಾರ ತಾಲೂಕಿನ ಕಡವಿನಹೊಸಹಳ್ಳಿಯಲ್ಲಿ ಸಕಲ ವಿಧಿ ವಿಧಾನಗಳೊಂದಿಗೆ ನಡೆಯಿತು.
ರಾಜ್ಯದ ನಾನಾ ಭಾಗಗಳಲ್ಲಿ ನಡೆಯುವ ಕರಗ ಉತ್ಸವಕ್ಕೆ ತನ್ನದೇ ಆದ ಇತಿಹಾಸ ಇರುವಂತೆ, ತಾಲೂಕಿನ ಬಾಗೀವಾಳು, ಕಡವಿನಹೊಸಹಳ್ಳಿ ಹಾಗೂ ಕಡವಿನಕೋಟೆ ಗ್ರಾಮಗಳ ಜನರು ಸೌಹಾರ್ದತೆಯಿಂದ ಪ್ರತಿ ಯುಗಾದಿಯಂದು ನಡೆಸಿಕೊಂಡು ಬರುತ್ತಿರುವ ಕರಗ ಉತ್ಸವಕ್ಕೆ ನೂರಾರು ವರ್ಷಗಳ ತನ್ನದೇ ಆದ ಇತಿಹಾಸವಿದೆ.
 ಇಲ್ಲಿನ ಬಾಗೀವಾಳು ಗ್ರಾಮದಿಂದ ಹೊರಡುವ ರಾಮೇಶ್ವರ ಸ್ವಾಮಿ ಕರಗ ಹೊರುವವರು ಶಿವರಾತ್ರಿಯಿಂದ ಯುಗಾದಿ ದಿನದವರೆಗೂ ವ್ರತಾಚರಣೆಗಳೊಂದಿಗೆ, ಧ್ಯಾನ,ಪೂಜೆ, ಧರಿಸಿ ಅತ್ಯಂತ ಮಡಿವಂತಿಕೆಯಿಂದ ರಾಮೇಶ್ವರಸ್ವಾಮಿಯ ಕರಗ ಹೊರಲು ಸಿದ್ದರಾಗುತ್ತಾರೆ. ಮೈತುಂಬ ಗಂಧ ಲೇಪಿಸಿಕೊಂಡು, ಬೋಳು ತಲೆಯ ಮೇಲೆ ಸುಮಾರು 10 ಕೆ.ಜಿ ತೂಗುವ ದುಂಡನೆಯ ಹರಿವಾಣ ಇಟ್ಟುಕೊಂಡು ಕರಗ ಹೊತ್ತ ವ್ಯಕ್ತಿಯು ಬಾಗೀವಾಳಿನಿಂದ ಕಡವಿಹೊಸಹಳ್ಳಿಗೆ ನಡೆದು ಬರುತ್ತಾರೆ.
 ಕರಗ ಹೊತ್ತವರು ಕಡವಿನಹೊಸಹಳ್ಳಿಗೆ ಬರುತ್ತಿದ್ದಂತೆಯೇ ಗುರುಪರಂಪರೆಯ ವಿಧಿವಿಧಾನಗಳ ಪ್ರಕಾರವಾಗಿ ಪೂಜಾ ಕಾರ್ಯಗಳು ನೆರವೇರುತ್ತದೆ. ನಂತರ ಕರಗ ಹೊತ್ತವರು ಗ್ರಾಮದಲ್ಲಿರುವ ಹೊಸಹಳ್ಳಿಯ ಅಲಕಮ್ಮದೇವಿ, ಲಕ್ಷ್ಮೀದೇವಿ, ಬಸವೇಶ್ವರಸ್ವಾಮಿ, ಆಂಜನೇಯ ಸ್ವಾಮಿ, ಮಾರಮ್ಮ ದೇವರುಗಳ ದೇವಾಲಯಕ್ಕೆ ಭೇಟಿ ನೀಡಿ ಮೆರವಣಿಗೆಯಲ್ಲಿ ತೆರಳುತ್ತದೆ.
 ನೂರಾರು ವರ್ಷಗಳ ಹಿಂದೆ ಕರಗವು ಉತ್ತರ ದಿಕ್ಕಿನಿಂದ ಈಶಾನ್ಯಕ್ಕೆ ಹೋಗುವ ಸಮಯದಲ್ಲಿ ಕೆಳಗೆ ಬಿದ್ದುಬಿಟ್ಟಿತಂತೆ, ಆಗ ಕರಗವನ್ನು ಹೊತ್ತ ವ್ಯಕ್ತಿಯು ತನ್ನ ಕೈಲಿದ್ದ ಬೆಳ್ಳಿ ಚಾಕುವಿನಿಂದ ಎದೆಗೆ ಇರಿದುಕೊಂಡರಂತೆ, ಆಗ ಸ್ಥಳವೆಲ್ಲಾ ರಕ್ತಮಯವಾಯಿತಂತೆ. ಆ ಗದ್ದೆಗೆ ಈಗಲೂ ರಕ್ತಕೋಡಿ ಗದ್ದೆ ಎನ್ನುತ್ತಾರೆ. ಕರಗ ಪ್ರತಿ ವರ್ಷ ಈ ರಕ್ತಕೋಡಿ ಗದ್ದೆಗೆ ಬಂದು ಪೂಜೆ ಸಲ್ಲಿಸಿ ತೆರಳುತ್ತದೆ. ನಂತರ ಕಡವಿನಹೊಸಹಳ್ಳಿ ಗ್ರಾಮದೊಳಕ್ಕೆ ತೆರಳಿದ ಕರಗ(ಬಿಂದಿಗೆ)ವನ್ನು ಹೊತ್ತ ವ್ಯಕ್ತಿಯು ನಿರ್ಧಿಷ್ಟ ಸ್ಥಳದಲ್ಲಿ ವಾದ್ಯಗಳ ಸದ್ದಿಗೆ ಹೆಜ್ಜೆ ಹಾಕುತ್ತಾ ಸಾಗುತ್ತಾರೆ.  ಈ ಸಮಯದಲ್ಲಿ ಭಕ್ತಾಧಿಗಳು ತಮ್ಮ ಇಷ್ಟಾರ್ಥ ನೆರವೇರಿಸುವಂತೆ ಹರಕೆ ಹೊತ್ತು ಕರಗದ ಹರಿವಾಣಕ್ಕೆ ನಾಣ್ಯಗಳನ್ನು ತುಂಬಿ ಪ್ರಾರ್ಥಿಸಿಕೊಳ್ಳುವ ಸಂಪ್ರದಾಯವಿದೆ. ಈ ಸಂದರ್ಭದಲ್ಲಿ ಕಡವಿನಕೋಟೆ ಗ್ರಾಮದಿಂದ ಮಹಿಳೆಯರು ಕಡವಿನಹೊಸಹಳ್ಳಿ ಗ್ರಾಮದಲ್ಲಿರುವ ಲಕ್ಷ್ಮೀದೇವಿಗೆ ಉಪ್ಪಾರ(ತಳಿಗೆ)ಯನ್ನು ಹೊತ್ತು ತಂದು ಅಲ್ಲಿ ದೇವರಿಗೆ ಪೂಜಿಸುವುದು ವಾಡಿಕೆ.
 ಈ ಸಂದರ್ಭವನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯ ನಾನಾ ಕಡೆಗಳಿಂದ ಸಾವಿರಾರು ಜನರು ಕಡವಿನಹೊಸಹಳ್ಳಿ ಹಾಗೂ ಬಾಗೀವಾಳು ಗ್ರಾಮಕ್ಕೆ ಆಗಮಿಸುವುದು ಯುಗಾದಿಯ ಸಂಭ್ರಮದ ಸಂತೋಷದ ಕ್ಷಣಗಳಲ್ಲಿ ಒಂದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement